ಚೆನ್ನೈ, ಅ.4: ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಕುರಿತಾಗಿ ನಾಳೆಯೊಳಗೆ ಮಾಹಿತಿ ನೀಡಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.
ಜಯಲಲಿತಾ ಅನಾರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಸುದ್ಧಿಗಳು ಹಾಗೂ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ, ಹಲವು ರೀತಿಯ ಅಂತೆ ಕಂತೆಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜಯಲಲಿತಾ ಅನಾರೋಗ್ಯ ಕುರಿತಾಗಿ ಮಾಹಿತಿ ನೀಡುವಂತೆ ಟ್ರಾಫಿಕ್ ರಾಮಸ್ವಾಮಿ ಎನ್ನುವವರು ನಿನ್ನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನಾಳೆಯೊಳಗೆ ಮಾಹಿತಿ ನೀಡಿ ಎಂದು ಸೂಚಿಸಿದೆ.
ದೇಹದ ನಿರ್ಜಲೀಕರಣ ಹಾಗೂ ತೀವ್ರ ಬಳಲಿಕೆಯಿಂದಾಗಿ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಜಯಾ ಆಪ್ತರಿಗಷ್ಟೇ ಆಸ್ಪತ್ರೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಆಸ್ಪತ್ರೆ ಸುತ್ತ ಮೂರು ಸುತ್ತಿನ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Discussion about this post