ಕಲ್ಪ ಮೀಡಿಯಾ ಹೌಸ್
ಸಾಗರ: ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದ್ದು, ಆಷಾಢ ದೇವತೆಗೆ ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಯಾರು ಈ ಆಷಾಢ ದೇವತೆ?
ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ ನಾಗಕನ್ಯೆಯ ರೂಪವನ್ನು ತಾಳಿ ಕೈಲಾಸವನ್ನು ಪ್ರವೇಶಿಸುತ್ತಾಳೆ. ಆಗ ಶಿವ ಧ್ಯಾನಾಸ್ಥನಾಗಿರುತ್ತಾನೆ. ಶಿವನನ್ನು ಕಂಡೊಡನೆ ಆಕೆ ಪಾರ್ವತಿಯ ರೂಪವನ್ನು ಧರಿಸಿ ಶಿವನ ಪಕ್ಕ ಆಸೀನಳಾಗುತ್ತಾಳೆ. ಎಲ್ಲವನ್ನು ಬಲ್ಲ ಆ ಮಹಾದೇವ ಆಕೆಯ ಕುತಂತ್ರವನ್ನು ತಿಳಿದು ಕೋಪನಿಷ್ಠನಾಗುತ್ತಾನೆ. ಕೋಪಾಗ್ನಿಯಿಂದ ಶಿವ ತ್ರಿಶೂಲದಿಂದ ಆಕೆಯನ್ನು ದೂರ ಸರಿಯೆಂದು ತಿವಿಯುತ್ತಾನೆ. ತ್ರಿಶೂಲದಿಂದ ಹೊರಟ ಜ್ವಾಲಾಗ್ನಿಯು ಆಷಾಢಳನ್ನು ಪರಿಶುದ್ಧಳನ್ನಾಗಿಸುತ್ತದೆ. ಆದರೂ ಶಿವನ ಕೋಪ ಕಡಿಮೆಯಾಗುವುದಿಲ್ಲ. ಆಗ ಆಷಾಢ ಶಿವನಿಗೆ ತಲೆಬಾಗಿ ನಾನು ನಿಮ್ಮನ್ನು ಮೆಚ್ಚಿದ್ದರಿಂದ ಹೀಗೆ ಮಾಡಬೇಕಾಯಿತು ನನ್ನ ತಪ್ಪನ್ನು ಮನ್ನಿಸಿ ಎಂದು ಶಿವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ.
ಆದರೂ ಶಿವ ಆಕೆಯ ತಪ್ಪನ್ನು ಕ್ಷಮಿಸುವುದಿಲ್ಲ ಬದಲಿಗೆ ಭೂಲೋಕದಲ್ಲಿ ಕಹಿ ರುಚಿಯ ಬೇವಿನ ಮರವಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾನೆ. ಆಗ ಆಷಾಢ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಆಗ ಶಿವ ಭೂಲೋಕದಲ್ಲಿ ಬೇವಿನ ಮರವಾಗಿ ಜನಿಸಿದರೂ ಪೂಜೆಗೆ ಅರ್ಹಳಾಗು ಎಂದು ಆಶೀರ್ವದಿಸುತ್ತಾನೆ. ಆ ಕಾರಣ ಆಷಾಢ ಮಾಸದಲ್ಲಿ ಪಾರ್ವತಿ ಸ್ವರೂಪಳಾದ ಬೇವಿನ ಮರವನ್ನು ಪೂಜಿಸುವ ವಾಡಿಕೆ ಇದೆ. ಹೀಗೆ ಭೂಮಿಯ ಮೇಲೆ ಬೇವಿನ ಮರವಾಗಿ ಜನಿಸಿದ ಆಷಾಢ ಪೂಜಾರ್ಹಳಾದಳು ಎನ್ನುತ್ತಾರೆ ಮೇಘಣಿ ವಂಶಸ್ಥರು.
ಆಷಾಢ ಮೇಘಣಿ ವಶಂಸ್ಥರ ಮನೆದೇವತೆ:
ಆಷಾಢ ಮಾಸದ ಸಮಯದಲ್ಲಿ ನಮ್ಮ ಮನೆದೇವತೆಯ ಪೂಜೆಯನ್ನು ಚಾಚು ತಪ್ಪದೆ ಆರಾಧಿಸಬೇಕು. ಏಕೆಂದರೆ ಸುಮಾರು 180-200 ವರ್ಷಗಳ ಹಿಂದೆ ನಮ್ಮ ತಾತಂದಿರು ಅಂದರೆ “ಮೇಘಣಿ ವಂಶಸ್ಥರು” ಕೊಲ್ಲೂರಿನ ಸಮೀಪದ ಮೇಘಣಿ ಎಂಬ ಹಳ್ಳಿಯಿಂದ ಕೃಷಿ ಕೆಲಸವನ್ನು ನಂಬಿಕೊಂಡು ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮಕ್ಕೆ ವಲಸೆ ಬರಬೇಕಾಯಿತು. ಆ ಸಮಯದಲ್ಲಿ ಯಾವುದೇ ವಾಹನಗಳ ವ್ಯವಸ್ಥೆ ಇರುತ್ತಿರಲಿಲ್ಲ. ಆದ ಕಾರಣ ಎತ್ತಿನ ಗಾಡಿಯನ್ನು ಬಳಸಿಕೊಂಡು ಬರುವ ಸಮಯದಲ್ಲಿ ಹಲವು ಕಷ್ಟಗಳು ಎದುರಾಗಿದ್ದವಂತೆ ಅಂತಹ ಸಮಯದಲ್ಲಿ ಅಲ್ಲಿಯೇ ನೆಲೆಸಿರುವಂತಹ ಆದಿಮಾತೆ ಆಷಾಡಮ್ಮನ ಮೊರೆ ಹೋಗಬೇಕಾಯಿತು.
ತಾಯಿ ನಮ್ಮ ಕಷ್ಟಗಳು ಪರಿಹಾರವಾಗಿ ನಮ್ಮ ಈ ವಲಸೆ ಪ್ರಯಾಣವನ್ನು ಸುಗಮವಾಗಿ ನಡೆಸಿಕೊಟ್ಟಲ್ಲಿ ನಾವು ವಾಸಿಸುವಂತಹ ಸ್ಥಳದಿಂದ ನಿನಗೆ ಆಷಾಢ ಮಾಸದಲ್ಲಿ ತಪ್ಪದೆ ಪೂಜೆಯನ್ನು ಸಲ್ಲಿಸುತ್ತೇವೆ ಎಂದು ನಮ್ಮ ಪೂರ್ವಜರು ಹೇಳಿಕೊಡಿದ್ದರಂತೆ ಎನ್ನುವ ವಾಡಿಕೆ ಇದೆ ಎನ್ನುತ್ತಾರೆ ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮೇಘಣಿ ಮನೆತನದ ಎಮ್.ಸಿ. ಮಂಜುನಾಥ್.
ಪೂಜಾ ವಿಧಾನ:
ಆಷಾಢಮ್ಮ ಎಂದು ನೆಲೆಸಿರುವ ತಾಯಿಯನ್ನು ಕಂಚಿನ ಕಲಶದಲ್ಲಿ ಆವಾಹನೆ ಮಾಡಿ ಮತ್ತು ಅಲಂಕರಿಸಿ ಕುಟುಂಬದ ಎಲ್ಲಾ ಸದಸ್ಯರು ಸೇರಿ ಪೂಜೆ ಸಲ್ಲಿಸಿ ಊರಿನ ಜನರಿಗೆ ಅನ್ನಸಂತರ್ಪಣೆ ಮಾಡುವ ಒಂದು ವಿಶೇಷ ಪೂಜಾ ಪದ್ಧತಿ ಮೇಘಣಿ ವಂಶಸ್ಥರು ನಡೆಸಿಕೊಂಡು ಬರುತ್ತಿರುತ್ತಾರೆ.
ಲೇಖನ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post