ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ವಿಐಎಸ್‍ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಗಣೇಶ್ ನೇತೃತ್ವದಲ್ಲಿ ವಿವಿಧ ಹಂತದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಭಟನೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ. ಶ್ರೀನಿವಾಸ್, ಭದ್ರಾವತಿಯ ಈ ಅವಳಿ ಕಾರ್ಖಾನೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಪ್ರತಿ ಬಾರಿ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಲಾಗುತ್ತಿದೆಯೇ ಹೊರತು, ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ದೂರಿದರು.
ಈ ಕಾರ್ಖಾನೆಗಳನ್ನು ಮುಚ್ಚುವ ಯತ್ನಗಳನ್ನು ನಡೆಸುತ್ತಿದ್ದು, ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಜಿಲ್ಲೆಯ ಆರ್ಥಿಕ ಪ್ರಗತಿಗೆ ಈ ಕಾರ್ಖಾನೆಗಳ ಪಾತ್ರ ಸಾಕಷ್ಟಿದೆ. ಸರ್.ಎಂ. ವಿಶ್ವೇಶ್ವರಯ್ಯನವರ ಮತ್ತು ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಸ್ಥಾಪನೆಯಾದ ಈ ಕಾರ್ಖಾನೆಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಸರ್ಕಾರದ ಸ್ವಾಮ್ಯದಲ್ಲೇ ಮುನ್ನಡೆಸಬೇಕು ಎಂದು ಒತ್ತಾಯಿಸಿದರು. ಹಾಗೂ ಗಣೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಎಲ್ಲ ಹಂತಗಳಲ್ಲೂ ಯುವ ಕಾಂಗ್ರೆಸ್ ಜೊತೆಗಿರಲಿದೆ ಎಂದು ತಿಳಿಸಿದರು.
ಗಣೇಶ್ ಮಾತನಾಡಿ, ಈ ಕಾರ್ಖಾನೆಗಳನ್ನು ಮುಚ್ಚುವ ಪ್ರಯತ್ನ ನಡೆಸುತ್ತಿರುವುದರಿಂದ ಜಿಲ್ಲೆಯ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದು, ನಿರುದ್ಯೋಗಿಗಳಾಗಿದ್ದಾರೆ. ಕಾರ್ಖಾನೆಗಳ ಉಳಿವಿಗಾಗಿ ವಿವಿಧ ಹಂತಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post