ಕಲ್ಪ ಮೀಡಿಯಾ ಹೌಸ್
ಬೀದರ್ : ಕೊರೋನಾ ಸಂಕಷ್ಟದ ನಡುವೆ ನಮ್ಮ ನಾಡಿನ ಅನೇಕ ಗಣ್ಯರನ್ನು ನಾವು ಕಳೆದುಕೊಂಡಿದ್ದೇವೆ. ಹಾಗೆಯೇ ಅತಿವೃಷ್ಟಿ, ಅನಾವೃಷ್ಟಿಯಿಂದ ಬಹಳಷ್ಟು ಜನ ಮೃಪತಟ್ಟಿದ್ದಾರೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಕೊರುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಮೊದಲನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೂಚಿಸಿದ ಸಂತಾಪ ಸೂಚನಾ ನಿರ್ಣಯ ವಿಷಯವಾಗಿ ಮಾತನಾಡಿದ ಅವರು, ಕೊರೋನಾ ಮಹಾಮಾರಿಯ ನಡುವೆಯೇ ರಾಜ್ಯದ ಅನೇಕ ಗಣ್ಯರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಮಾಜಿ ಶಾಸಕರಾದ ಸೈಯದ್ ಝುಲ್ಸೇಖಾ ರಷ್ಮಿ, ಮಹಮ್ಮದ್ ಲೈಕೋಧೀನ್ ಅವರನ್ನು ನಾವು ಕಳೆದುಕೊಂಡಿದ್ದೇವೆ.
ಸೈಯದ್ ಝುಲ್ಸೇಖಾ ರಷ್ಮಿ ಅವರು ಮೂಲತಃ ಬೀದರ್ ನವರು. ಹೋರಾಟದಿಂದಲೇ ಅವರು 1994ರಲ್ಲಿ ಮೊದಲನೇ ಬಾರಿಗೆ ಗೆದ್ದು ಬಂದಿದ್ದರು. ಆ ದಿನಗಳಲ್ಲಿ ಅವರು ಬಿಎಸ್ಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಇಡೀ ರಾಜ್ಯಕ್ಕೆ ಬಿಎಸ್ಪಿಗೆ ಒಂದೇ ಸಿಟು ಬಂದಿತ್ತು. ಅಹಿಂದ ವರ್ಗದ ಚಳುವಳಿಯಿಂದ ಬಂದಂತ ವ್ಯಕ್ತಿ ಅವರಾಗಿದ್ದರು. ನಾನು ಅವರ ಜೊತೆಗೆ ಕುಳಿತು ಮಾತನಾಡುತ್ತಿದ್ದಾಗಲೂ ಕೂಡ ಅವರು ಅಹಿಂದ ವರ್ಗದ ಬಗ್ಗೆನೇ ಮಾತನಾಡುತ್ತಿದ್ದರು. ಏಪ್ರಿಲ್ ನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಅವರು ನಮ್ಮನ್ನಗಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇನ್ನೊಬ್ಬ ಮಾಜಿ ಶಾಸಕರಾಗಿದ್ದ ಮಹಮ್ಮದ್ ಲೈಕೋಧೀನ್ ಅವರು ಕೂಡ ಬೀದರ್ ಜಿಲ್ಲೆಯ ಚಿಟಗುಪ್ಪಾದವರು. ಅವರು ಶಾಸಕರಾಗುವ ಮೊದಲಿಗೆ ವಕೀಲರಾಗಿದ್ದರು. ಶಾಸಕರಾಗಿ ಅಧಿಕಾರಾವಧಿ ಪೂರ್ಣಗೊಳಿಸಿದ ಬಳಿಕ ಕೂಡ ಅವರು ವಕೀಲ ವೃತ್ತಿಯಲ್ಲೇ ಮುಂದುವರೆದಿದ್ದರು. ಕೊನೆಯಗಳಿಗೆಯವರೆಗೂ ಕೂಡ ಅವರು ವಕೀಲರಾಗಿದ್ದರು ಎಂದು ತಿಳಿಸಿದರು.
ಕೋವಿಡ್ ಕಾರಣದಿಂದಾಗಿ ನಾವು, ನಮ್ಮ ಅಕ್ಕಪ್ಪಕದಲ್ಲೆ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಕೂಡ ಅನೇಕರು ಪ್ರಾಣಬಿಟ್ಟಿದ್ದಾರೆ. ಅವರೆಲ್ಲರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರುಗಳ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post