Read - < 1 minute
ಬೆಂಗಳೂರು, ಅ.9: ದಸರಾ, ವಿಜಯದಶಮಿ ಹಾಗೂ ದುಗರ್ಾಪೂಜೆ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ಜನರು ಎಲ್ಲ ಸಂಕಷ್ಟಗಳಿಂದ ಪಾರಾಗಿ ನಾಡಿನಲ್ಲಿ ನೆಮ್ಮದಿ ನೆಲೆಸಿ ಎಲ್ಲರ ಬದುಕು ಹಸನಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಶುಭ ಹಾರೈಸಿದ್ದಾರೆ.
ದಸರಾ ಹಬ್ಬ ಎಲ್ಲರ ಕಷ್ಟವನ್ನು ಪರಿಹರಿಸಿ ಸುಖ-ಶಾಂತಿ-ನೆಮ್ಮದಿ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದ್ದಾರೆ.
ಆಯುಧ ಪೂಜೆ ಮತ್ತು ವಿಜಯದಶಮಿ ಇಂದಿಗೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ನಾಡಿನ ಜನರು ಕೂಡ ಶ್ರದ್ಧೆಯಿಂದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಶ್ರೀಮಂತ ಪರಂಪರೆ, ಸಾಂಸ್ಕೃತಿಕ ವೈಭವಕ್ಕೆ ದಸರಾ ಮೆರುಗು ನೀಡಿದೆ. ನಾಡಿನುದ್ದಕ್ಕೂ ನೆಮ್ಮದಿ ತರಲಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂದೇಶ ನೀಡಿ ನಾಡಿನ ಜನತೆಗೆ ಸುಖ-ಶಾಂತಿ-ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ನಾಡಿನಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸಲಿ. ದುಷ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸುವ ಸಂಕೇತವಾದ ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಸ್ಫೂರ್ತಿ, ಭರವಸೆ ತುಂಬಲಿ ಎಂದು ಆಶಿಸಿದ್ದಾರೆ.
ಸಚಿವರಾದ ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ.
Discussion about this post