Read - 2 minutes
‘ಆಚಾರವಿಲ್ಲದ ನಾಲಿಗೆ, ನಿನ್ನ.. ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವ ನಾಲಿಗೆ’ ಪುರಂದರ ದಾಸರು ಅಂದು ರಚಿಸಿದ ಪದ್ಯ ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ. ಹಲವಾರು ನೀಚ ಬುದ್ಧಿಯ ನಾಲಿಗೆಗಳು ವಿವಿಧ ಪಕ್ಷಗಳಲ್ಲಿ ಭಾರತದೆಲ್ಲೆಡೆ ಹರಿದಾಡುತ್ತಿವೆ.
ಹೌದು. ನಾನೀಗ ಹೇಳ ಹೊರಟಿರುವುದು ಇದೀಗ ಎಲ್ಲೆಡೆ ಪ್ರತಿಧ್ವನಿಸುತ್ತಿರುವ ’ಸರ್ಜಿಕಲ್ ಸ್ಟ್ರೈಕ್’ ಬಗ್ಗೆ. ಕಳೆದ ಎಪ್ಪತ್ತು ವರ್ಷಗಳಿಂದ ನೆರೆಯ ಪಾಕಿಸ್ತಾನದಿಂದ ಭಾರತೀಯರು ಅನುಭವಿಸಿದ ಸಾವು ನೋವಿನ ಪ್ರಮಾಣ, ಸಂಕಟ ಅನುಭವಿಸಿದವರಿಗಷ್ಟೇ ಗೊತ್ತು. ಆದರೂ ಶತ್ರು ರಾಷ್ಟ್ರದ ಕುತ್ತಿಗೆ ಅದುಮುವ ತಾಕತ್ತು ನಮ್ಮನ್ನು ಆಳಿದ ಯಾವ ಸರಕಾರದ ಪ್ರಧಾನಿಗಳಿಗೂ ಇರಲಿಲ್ಲ. ಅಪರೂಪಕ್ಕೆ ದೇಶದ ಭಾಗ್ಯವೆಂಬಂತೆ ನಮ್ಮ ಈಗಿನ ಪ್ರಧಾನಿ ಮಾನ್ಯ ಮೋದಿಜಿಯವರು ಆ ಧೈರ್ಯವನ್ನು ತೋರಿಸಿ ’ಎಲ್-ಓ-ಸಿ’ ಪ್ರದೇಶದಲ್ಲಿ ಸೈನ್ಯ ಮುನ್ನುಗ್ಗಿಸಿ ಉಗ್ರರ ಹತ್ಯೆ ಗೈದು ಜಗತ್ತೇ ನಿಬ್ಬೆರಗಾಗುವಂತೆ ಭಾರತದ ಶೌರ್ಯವನ್ನು ಮೆರೆದಿದ್ದಾರೆ.
ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ಸಂಗತಿ. ಎಲ್ಲರೂ ಪಕ್ಷ ಭೇದ ಮರೆತು ಪ್ರಧಾನಿಯವರನ್ನು ಬೆಂಬಲಿಸಿ ಅವರ ಕೈಬಲಪಡಿಸಿ ಏಕತೆಯನ್ನು ತೋರಿಸಬೇಕಾದ ಸಮಯದಲ್ಲಿ ಈ ರೀತಿ ದಿನಕ್ಕೊಬ್ಬ ತಲೆಕೆಟ್ಟವನು ಟಿ ವಿ ಮಾಧ್ಯಮದವರ ಮುಂದೆ ಅಶಂಕೆ ವ್ಯಕ್ತ ಪಡಿಸುವುದು, ಸಾಕ್ಷ್ಯ ವೊದಗಿಸುವಂತೆ ಅಸಂಭದ್ಧ ಮಾತುಗಳನ್ನಾಡುವುದು ಭಾರತದ ಅಖಂಡತೆಗೆ ಕಂಟಕವೇ ಸರಿ. ನಮ್ಮ ಸೈನಿಕರನ್ನು ಹುರಿದುಂಬಿಸಿ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದು ಈ ಸಮಯದ ಅವಶ್ಯಕತೆಯಾಗಿದೆ.
ಮೊನ್ನೆ ತಾನೇ ‘ಉರಿ’ ಎಂಬ ಸ್ಥಳದಲ್ಲಿ ನಡೆದ ನಮ್ಮ ಹತ್ತೊಂಬತ್ತು ಸೈನಿಕರ ಕಗ್ಗೊಲೆಗೆ ಪ್ರತಿಕಾರವೆಂಬಂತೆ ಭಾರತ ಸೀಮೀತ ಧಾಳಿ ಎಸಗಿ, ಶತ್ರು ದೇಶಕ್ಕೆ ಪ್ರತ್ಯುತ್ತರ ಕೊಟ್ಟಿತು. ಈ ಸಮಯದಲ್ಲಿ ಕಪ್ಪು ಹಣದ ಕಂತೆಗಳ ಮೇಲೆ ಕುಳಿತು, ಚಿನ್ನದ ತಟ್ಟೆಯಲಿ ಮೃಷ್ಠಾನ ಭೋಜನ ಉಣ್ಣುವ ರಾಜಕೀಯ ಪ್ರತಿ-ಪಕ್ಷವೊಂದರ ನಾಯಕರು ಹೊಟ್ಟೆ ಉರಿಯಿಂದ ಈ ಧಾಳಿ ಸಂದೇಹಾಸ್ಪದವಾಗಿದೆ ಹಾಗೂ ಈ ದಾಳಿ ನಡೆದ ಬಗ್ಗೆ ಸರಕಾರವು ಸಾಕ್ಷ್ಯ ಕೊಡಬೇಕೆಂದು ಆಗ್ರಹಿಸುವುದು ನೀಚತನದ ಪರಮಾವಧಿ ಆಗಿದೆ. ಜಗತ್ತಿನೆಲ್ಲೆಡೆ ಅಕ್ರಮ ಆಸ್ತಿ, ಹಣ ಸಂಪಾದಿಸಿ ಹಲವಾರು ಜನ್ಮಕ್ಕೆ ಆಗುವಷ್ಟು ಕೂಡಿಟ್ಟು ಸರಕಾರದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದ ಈ ಮಂದಿಯ ನಡತೆಯೇ ಸಂದೇಹಾಸ್ಪದವಾಗಿದೆ.
ಇನ್ನು ಚಿತ್ರರಂಗದ ದಿಗ್ಗಜ ಖಾನ್ ಗಳು, ಭಟ್ ಗಳು, ಬೆನೆಗಲ್ ಗಳು ಪಾಕ್ ತಾರೆಯರ ಬಗ್ಗೆ ವಿಪರೀತ ಪ್ರೀತಿ ಹಾಗು ಕಾಳಜಿ ತೋರಿಸುತ್ತಿದ್ದಾರೆ. ಓಂ ಪುರಿ ಸಾಹೇಬರಂತೂ ಹುತಾತ್ಮರಾದ ಸೈನಿಕರ ಕುರಿತು ಪ್ರತಿಕ್ರಯಿಸುತ್ತ ಅವರನ್ನು ಸೈನ್ಯಕ್ಕೆ ಸೇರಲು ಹೇಳಿದ್ದು ಯಾರು ಎಂದು ಲಘುವಾಗಿ ಟೀಕಿಸಿದ್ದು ಬಹಳ ದುಃಖಕರ ಸಂಗತಿ. ಸೋಜಿಗದ ವಿಷಯವೆಂದರೆ ಪಾಕ್ ತಾರೆಯರು ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಧಾಳಿಯ ಬಗ್ಗೆ ಖಂಡಿಸುವುದು ಬಿಡಿ, ಚಕಾರ ಎತ್ತಲೂ ಹೆದರುತ್ತಾರೆ. ಏಕೆಂದರೆ ತಮ್ಮ ದೇಶದ ವಿರುದ್ಧ ಏನಾದರೂ ಹೇಳಿಕೆ ಕೊಟ್ಟಲ್ಲಿ, ಅದರ ಪರಿಣಾಮ ಏನಾಗಬಹುದು ಎಂಬುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ನಮ್ಮಲ್ಲಿ, ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ನಮ್ಮದೇ ದೇಶದ ವೀರ ಸೈನಿಕರನ್ನು ಹೀಯಾಳಿಸುವ ಬಾಯಿ ಬಡಕುತನಕ್ಕೆ ಯಾವುದೇ ಶಿಕ್ಷೆಯ ಭಯ ಇಲ್ಲವಾಗಿದೆ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಗೆ ಯಾವುದೇ ಗಡಿ, ಎಲ್ಲೆ ಇಲ್ಲವೆಂಬುದು ಎಲ್ಲರೂ ಒಪ್ಪುವಂತದ್ದು. ಆದರೆ ಲಲಿತಕಲೆ ಎಂಬುದು ಹೊಟ್ಟೆ ತುಂಬಿದ ಮೇಲೆ ಆರಾಮವಾಗಿ ಕುಳಿತು ಜೀವನದ ಸುಖವನ್ನು ಸವಿಯುವ ಜನರಿಗೆ ಮಾತ್ರ. ಪಾಕ್ ಗಡಿಯಲ್ಲಿ ಹಗಲು ರಾತ್ರಿ ಕಾವಲು ಕಾಯುವ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರ ಸಂಸಾರವೆಲ್ಲಿ? ಭೂಗತ ಲೋಕದ ಹಣದಲ್ಲಿ ಅದ್ದೂರಿ ವೆಚ್ಚದ ಸಿನೆಮಾ ತಯಾರಿಸಿ, ಸಾವಿರಾರು ಕೋಟಿ ಹಣದ ಹೊಳೆ ಹರಿಸಿ ವ್ಯವಹಾರ ನಡೆಸುವ ಚಿತ್ರಮಂದಿಗಳೆಲ್ಲಿ!
ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರ ಧಾಳಿ ನಡೆದಾಗ ಲೈವ್ ಕಾರ್ಯಾಚರಣೆ ತೋರಿಸಿ ದೊಡ್ಡ ತಪ್ಪು ಎಸಗಿ, ಕಮಾಂಡೋ ಪಡೆಯ ಅಮೂಲ್ಯ ರತ್ನಗಳಾದ ಮೇಜರ್ ಉನ್ನಿ ಕೃಷ್ಣನ್ ಅಂಥವರನ್ನು ಕಳೆದು ಕೊಂಡಿದ್ದೇವೆ. ಅತ್ತ ಕಡೆ ಉಗ್ರರೂ ಕುಳಿತು ದ್ರಶ್ಯಾವಳಿಗಳನ್ನು ವೀಕ್ಷಿಸಿ ಪ್ರತಿತಂತ್ರವನ್ನು ಹೆಣೆದದ್ದು ಗೊತ್ತಾಗಿ ಪ್ರಸಾರವನ್ನು ನಿಲ್ಲಿಸಲಾಗಿತ್ತು. ಇದನ್ನು ಎಲ್ಲರೂ ಮರೆತಿದ್ದಾರೋ ಹೇಗೆ?
ಈಗಲೂ ಸೀಮೀತ ದಾಳಿಯ ಸಾಕ್ಷ್ಯ ಜಗತ್ತಿಗೆ ತೋರಿಸಿದರೆ ಪಾಕಿಗಳಿಗೆ ಅದರ ಪ್ರತಿತಂತ್ರಕ್ಕೆ ಪರೋಕ್ಷವಾಗಿ ಇನ್ನು ಮುಂದೆ ನಡೆಸಬಹುದಾದ ದಾಳಿಗೆ ಸಹಕರಿಸಿದಂತೆ ಆಗುವುದಿಲ್ಲವೇ? ಆ ಕೇಜ್ರಿವಾಲರಿಗಂತೂ ಗಂಟಲು ಮಾತ್ರವಲ್ಲ ತಲೆಯೂ ಕೆಟ್ಟಿರಬಹುದೇನೋ. ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ದೇಶಕ್ಕೆ ಹಾಗೂ ನಮ್ಮ ಸೈನ್ಯಕ್ಕೆ ಅಪಮಾನಿಸುವುದು ತಿಳಿಯುವುದಿಲ್ಲವೇ? ನೆಹರು ವಂಶದ ‘ಯುವ’ ಕುಡಿಯಂತೂ ದೇಶದ ಪ್ರಧಾನಿಯನ್ನು ರಕ್ತದ ದಲ್ಲಾಳಿ ಮಾಡುವವ ಎಂದು ಜರೆದಿದ್ದಾರೆ. ಇದೆಲ್ಲ ಮುಂಬರುವ ಚುನಾವಣೆಯ ಮೇಲೆ ಕಣ್ಣಿರಿಸಿ ಮಾಡುವಂತ ಆತ್ಮವಂಚನೆ ಅಲ್ಲದೆ ಮತ್ತಿನ್ನೇನು?
ಇಂದು ಪ್ರತಿಯೊಬ್ಬ ಭಾರತೀಯನಿಗೆ ನಮ್ಮ ಸರಕಾರ ಹಾಗೂ ನಮ್ಮ ಸೈನ್ಯದ ಬಗ್ಗೆ ಅಭಿಮಾನ, ಮೆಚ್ಚುಗೆ ಇದೆ. ಇಲ್ಲವಾದಲ್ಲಿ ಅವನು ಭಾರತೀಯನೇ ಅಲ್ಲ.
ಲೇಖಕರು: ಆಶಾಢ, ಬೆಂಗಳೂರು
Discussion about this post