ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮೀಣ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿದ್ದು, ಹೋರಿ ಪ್ರಿಯರಲ್ಲಿ ಉತ್ಸಾಹಕ್ಕೆ ಮೂಡಿಸಿತ್ತು.
ದೀಪಾವಳಿಯ ನಂತರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರೀಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಆನವಟ್ಟಿಯ ಪವರ್’ಸ್ಟಾರ್, ಹಿರೇಕಸವಿ ಹಂತಕ, ತಡಸನಹಳ್ಳಿ ಡಾನ್, ಬಿಳಕಿ ಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ, ಬೈರೇಕೊಪ್ಪದ ಮದಗಜ, ಕೊಡಕಣಿ ಕದಂಬ, ಶಿರಾಳಕೊಪ್ಪದ ವೀರಕೇಸರಿ, ಸೊರಬದ ಶ್ರೀರಾಮ, ಚಿಕ್ಕಸವಿ ಜನಮೆಚ್ಚಿದ ಮಗ, ಕೊಡಕಣಿ ಬಸವ, ಯಲವಳ್ಳಿ ಗ್ರಾಮದ ಹೋರಿಗಳಾದ ಪಾಳೇಗಾರ, ಜಮೀನ್ದಾರ, ಗರುಡ, ಅಭಿಮನ್ಯು, ಕಂಸ ಹೋರಿ ಸವಿನೆನಪಿಗಾಗಿ ಕಲ್ಲೇಶ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು.
ಗ್ರಾಮ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post