ಇಂದಿನಿಂದ ಬ್ರಿಕ್ಸ್ ಶೃಂಗ ಸಭೆ: ಮಹತ್ವದ ರಾಜತಾಂತ್ರಿಕ ವಿಚಾರಗಳ ಚರ್ಚೆ
ನವದೆಹಲಿ, ಅ.15: ವಿಶ್ವದ ಮುಂದುವರಿಯುತ್ತಿರುವ ಪ್ರಮುಖ ಐದು ರಾಷ್ಟ್ರಗಳ ಸಂಘಟನೆ ಬ್ರಿಕ್ಸ್ ಶೃಂಗ ಸಭೆಗೆ ಗೋವಾದಲ್ಲಿ ಅ.15ರಂದು ಚಾಲನೆ ದೊರೆಯಲಿದ್ದು, ಭಯೋತ್ಪಾದನೆ ಹಾಗೂ ಆರ್ಥಿಕ ವಿಚಾರ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ.
ಇದೇ ವೇಳೆ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ನಡುವೆ ಹಲವಾರು ಮಹತ್ವದ ಒಪ್ಪಂದಗಳು ಅಂತಿಮಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜತೆ ನಡೆಸಲಿರುವ ದ್ವಿಪಕ್ಷೀಯ ಮಾತುಕತೆ ಮಹತ್ವಪಡೆದುಕೊಂಡಿದೆ.
ಪ್ರಧಾನಿ ಮೋದಿ ವಿವಿಧ ದೇಶಗಳ 10ಕ್ಕೂ ಹೆಚ್ಚು ನಾಯಕರೊಂದಿಗೆ ಮಾತುಕತೆ ನಡೆಲಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ಹೊರತಾಗಿ ಭೂತಾನ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್ ನ ಆಡಳಿತ ಮುಖ್ಯಸ್ಥರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಅ.16ರಂದು ಮ್ಯಾನ್ಮಾರ್ ಕೌನ್ಸೆಲರ್ ಆನ್ ಸಾನ್ ಸೂಕಿ ಭಾರತಕ್ಕೆ ಬರಲಿದ್ದು, ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ನಂತರ ಭಾರತಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಪ್ರಧಾನಿ ಮೋದಿ ಶನಿವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ ಎನ್ಎಸ್ ಜಿ ಸೇರ್ಪಡೆಯಾಗಲು ಚೀನಾ ವಿರೋಧ ವ್ಯಕ್ತಪಡಿಸಿರುವುದು, ಉಗ್ರ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಸತತ ಎರಡನೇ ಬಾರಿ ವಿರೋಧಿಸಿರುವ ವಿಚಾರ ಮಾತುಕತೆ ವೇಳೆ ಪ್ರಸ್ತಾಪವಾಗುವ ಸಾಧ್ಯತೆ ಇದೆ.















