ನವದೆಹಲಿ: ಅ:25: ಮುಂಬೈನಲ್ಲಿರುವ ಹಾಜಿ ಅಲ್ ದರ್ಗ ಒಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ದರ್ಗ ಟ್ರಸ್ಟ್ ಸುಪ್ರೀಂಕೋರ್ಟ್ ತಿಳಿಸಿದ್ದು, ಅಗತ್ಯ ಮೂಲಸೌಕರ್ಯಗಳ ಬದಲಾವಣೆಗಾಗಿ ತನಗೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರಿದೆ.
ಮಸೀದಿ ಪ್ರವೇಶಿಸಲು ಪುರುಷರಂತೆ ಮಹಿಳೆಯರಿಗೂ ಅವಕಾಶ ನೀಡಬೇಕೆಂಬ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧದ ಟ್ರಸ್ಟ್ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಲೇವಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು ಇಂದು ಈ ಮೇಲ್ಮನವಿಯ ವಿಚಾರಣೆ ನಡೆಸಿತು. ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯ ಟ್ರಸ್ಟ್ ಪರ ವಾದ ಮಂಡಿಸಿದರು.
ಮಹಿಳೆಯರಿಗೆ ದರ್ಗದ ಪವಿತ್ರ ಸ್ಥಳ ಪ್ರವೇಶಿಸಲು ಟ್ರಸ್ಟ್ ಇಂಗಿತ ವ್ಯಕ್ತಪಡಿಸಿದೆ. ಈ ಬಗ್ಗೆ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಿದೆ. ಅಗತ್ಯ ಮೂಲಸೌಕರ್ಯಗಳ ಬದಲಾವಣೆಗಾಗಿ ತನಗೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.















