ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕಿನ ಭೀಮನಕಟ್ಟೆ ಬಳಿ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿರುವಂತೆ ಮಾಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಹೌದು… ಮುಳುಬಾಗಿಲು, ಹೆಗ್ಗೋಡು ಗ್ರಾಪಂ ವ್ಯಾಪ್ತಿಗೆ ಹತ್ತಿರದಲ್ಲಿರುವ ತೂಗುಸೇತುವೆ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ. ಆದರೂ ಇದರ ಮೇಲೆ ದ್ವಿಚಕ್ರ ವಾಹನ ಸಂಚಾರವೂ ಸಹ ಎಗ್ಗಿಲ್ಲದೇ ಸಾಗಿದ್ದು, ಯಾವುದೇ ಕ್ಷಣದಲ್ಲಿ ಅಪಾಯಕ್ಕೆ ಎಡೆ ಮಾಡಿಕೊಡುವಂತಿದೆ.
Also Read: ಅಹಮದಾಬಾದ್ ಬ್ಲಾಸ್ಟ್: ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು: ಸ್ಪೋಟಕ ಮಾಹಿತಿ ಬಹಿರಂಗ
25 ವರ್ಷ ಆಯಸ್ಸಿನ ಸೇತುವೆ 15 ವರ್ಷಕ್ಕೆ ಅಧೋಗತಿಯತ್ತ!
2007ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ತೂಗು ಸೇತುವೆಗೆ 25 ವರ್ಷ ಆಯಸ್ಸಿದೆ ಎಂದು ಸರಕಾರಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 15 ವರ್ಷ ಕಳೆಯುವುದರ ಒಳಗೆ ತೂಗು ಸೇತುವೆ ಸ್ಥಿತಿ ಗಂಭೀರವಾಗಿದೆ. ಜಿಪಂ, ತಾಪಂ ಆಡಳಿತ ಈ ಕುರಿತು ಎಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ?
Also Read: 52 ವಿದ್ಯಾರ್ಥಿನಿಯರಿಗೆ 1 ಲೀ. ಹಾಲು, 1 ಕೆಜಿ ಚಿಕನ್, ಸರ್ಕಾರ ನೀಡಿದ್ದ ಬೆಡ್’ಶೀಟ್ ಮಾಯ: ಏನಿದು ಕರ್ಮಕಾಂಡ?
ಆರಗ ಜ್ಞಾನೇಂದ್ರ ಶಿಫಾರಸಿನ ನಿರ್ಮಾಣ – ಎಂಎಡಿಬಿ ಅನುದಾನ
ಆಲಗೇರಿ, ಸೌಳಿ, ಬಾಳೇಕೊಡ್ಲು, ಗೊರಕೋಡು, ಹೊಳೆ ಮದ್ಲು, ಬಿಕ್ಕೋಳಿ, ಬೋಗಾರುಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳ ಸಾರ್ವಜನಿಕರು ಭೀಮನಕಟ್ಟೆ ಬಳಿ ಸೇತುವೆ ನಿರ್ಮಿಸಬೇಕೆಂದು ಸುಮಾರು 30 ವರ್ಷಗಳಿಂದಲೂ ಬೇಡಿಕೆ ಮಂಡಿಸುತ್ತಲೇ ಬಂದಿದ್ದರು. 1983ರಲ್ಲಿ ಡಿ.ಬಿ. ಚಂದ್ರೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ಧಪಡಿಸಲಾಗಿತ್ತು. ಆಡಳಿತಾತ್ಮಕ ಗೊಂದಲ ದೆಸೆಯಿಂದಾಗಿ ಸೇತುವೆ ನಿರ್ಮಾಣದ ಪ್ರಸ್ತಾಪ ಅಲ್ಲಿಗೆ ಮೊಟುಕುಗೊಂಡಿತು.
ನಂತರದ ದಿನಗಳಲ್ಲಿ ಸೇತುವೆ ವಿಚಾರ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ರಾಜಕೀಯ ವಿಚಾರವಾಗಿ ಹೊರಹೊಮ್ಮುತ್ತಿತು. ಆದರೂ ಸೇತುವೆ ಬೇಡಿಕೆ ಈಡೇರಲಿಲ್ಲ. ಆರಗ ಜ್ಞಾನೇಂದ್ರ ಶಾಸಕರಾಗಿದ್ದ ಅವಧಿಯಲ್ಲಿ ಸೇತುವೆ ಬೇಡಿಕೆಗೆ ಮತ್ತೆ ಜೀವ ಬಂತು. ಆರಗ ಶಿಫಾರಸಿನ ಮೇರೆಗೆ 2007ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಪದ್ಮನಾಭ ಭಟ್ ಕೊನೆಗೂ ತೂಗು ಸೇತುವೆ ನಿರ್ಮಾಣಕ್ಕೆ 25ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರು. ನಿರ್ವಹಣೆ ಇಲ್ಲದೆ ಸೇತುವೆ ಈಗ ಅಪಾಯದಲ್ಲಿದೆ.
ನಿಷೇಧವಿದ್ದರೂ ವಾಹನ ಓಡಾಟ
ತೂಗುಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧವಿದ್ದರೂ ದ್ವಿಚಕ್ರ ವಾಹನಗಳು ಪುರುಸೊತ್ತಿಲ್ಲದೆ ಸಂಚರಿಸುತ್ತಿವೆ. ತೂಗುಸೇತುವೆಗೆ ಬಣ್ಣ, ಸವಕಳಿ ತಡೆಯಲು ಎಣ್ಣೆ ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಸಲು ಗ್ರಾ.ಪಂ. ಆಡಳಿತ ಮಂಡಳಿ ಲೆಕ್ಕಾಚಾರ ಮಾಡಿ (ಹೆಗ್ಗೋಡು, ಮುಳುಬಾಗಿಲು ಗ್ರಾಪಂ) ಇಂದು ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿ – ಸೇತುವೆ ನಿರ್ವಹಣೆ ಇಲ್ಲದೆ ಅಪಾಯದಲ್ಲಿದೆ.
ತೂಗು ಸೇತುವೆ ಸಂಪರ್ಕದ ಅನುಕೂಲ
ತೂಗು ಸೇತುವೆ ಸಂಪರ್ಕದ ಅನುಕೂಲವನ್ನು ಮುಳುಬಾಗಿಲು, ಹೆಗ್ಗೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಾಗಿ ಪಡೆಯುತ್ತಾರೆ. ಸೇತುವೆ ಪ್ರದೇಶ ಹೆಗ್ಗೋಡು ಗ್ರಾಪಂ ವ್ಯಾಪ್ತಿಗೆ ಸೇರಿದ್ದು ನಿರ್ವಹಣೆ ಜವಾಬ್ದಾರಿ ನಿಭಾಯಿಸುವಲ್ಲಿ 2 ಗ್ರಾಪಂ ಪೂರ್ಣ ವಿಫಲವಾಗಿದೆ ಎನ್ನಲೇಬೇಕು.
ಗೃಹ ಸಚಿವರೇ ಗಮನಿಸಿ!
ಸರ್ಕಾರಿ ಅನುದಾನ ಬಳಸಿ ನಿರ್ವಹಣೆ ಮಾಡಬಹುದಾಗಿದ್ದರೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಆಡಳಿತ ಆಸಕ್ತಿ ತಾಳುತ್ತಿಲ್ಲ ಎಂಬ ದೂರು ಸಾರ್ವಜನಿಕರದ್ದಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿರುವ ತೂಗು ಸೇತುವೆ ಉಳಿಸಿಕೊಳ್ಳಲು ಆಡಳಿತ ಮೀನಾ ಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ನಿವಾದರೂ ಒಮ್ಮೆ ತಿಳಿ ಹೇಳಿ ಅವರಿಗೆ. ಪ್ರಾಣಾಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಚುರುಕಾಗಿ ಕರ್ತವ್ಯ ನಿರ್ವಹಿಸಲಿ ಎಂಬ ಆಶಯದೊಂದಿಗೆ.
(ಚಿತ್ರ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post