ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಅನಾದಿಕಾಲದಿಂದಲೂ ತಮ್ಮ ಜೀವನಾವಶ್ಯಕ ನೀರು, ಬೆಳೆಗಳ ಸಮೃದ್ಧಿ ಹಾಗೂ ಮಾನಸಿಕ ನೆಮ್ಮದಿಗಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮ ದೇವತೆ ಆರಾಧನೆ ಇಂದಿಗೂ ಸವೆಯದೆ ಜೀವಂತವಾಗಿದ್ದು, ಈ ವೇಳೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ನಮ್ಮನ್ನು ಸಾಕಿ ಸಲುಹುವ ತಾಯಿಗೆ ಗೌರವ ನೀಡಿ ಆಕೆಯ ಹೆಸರಲ್ಲಿ ವಿಶೇಷ ಉತ್ಸವಾದಿಗಳನ್ನು ನಡೆಸುವ ಮೂಲಕ ನಮ್ಮ ಬೆಳೆ, ನೆಲ, ಜಲವನ್ನು ವೃದ್ಧಿಗೊಳಿಸಿಕೊಳ್ಳಬೇಕು ಎಂದು ಅಸಾದಿ ರಾಜುಮೂಗೂರು ಹೇಳಿದರು.
ಸಮೀಪದ ಯಲಸಿ ಗ್ರಾಮದಲ್ಲಿ ಅವರು ಇದೇ ತಿಂಗಳ 23ರಿಂದ ನಡೆಯಲಿರುವ ಮಾರಿಜಾತ್ರೆಯ ಪ್ರಮುಖ ಘಟ್ಟವಾದ ಅಂಕೆ ಪ್ರಕ್ರಿಯೆ ನಡೆಸಿ ಮಾತನಾಡಿದರು.
ಗ್ರಾಮದೇವತೆಯಾಗಿ ಸ್ಥಾಪಿಸಿಕೊಂಡ ಆಕೆಯ ಎದುರು ನಾವೆಲ್ಲ ಕಟಿಬದ್ಧರಾಗಿದ್ದು ಜಾತ್ರಾ ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಶಾಂತಿಯುತವಾಗಿ ಆಚರಿಸುವ ಮೂಲಕ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಳ್ಳಬೇಕು ಎಂದರು.
ಅಕ್ಕಿ, ಕುಂಕುಮ, ಅರಿಶಿನ, ಕಳಶಗಳ ಮೂಲಕ ತಾಂತ್ರಿಕ ರಂಗ ರಚಿಸಿ ಗ್ರಾಮಸ್ಥರಿಗೆ ಕಂಕಣ ತೊಡಿಸಿದರು. ಕಂಕಣ ಕಾರ್ಯ ಬಳಿಕ ಗ್ರಾಮ ದೇವತೆ ದೇವಸ್ಥಾನದ ಸುತ್ತ ಮೂರು ಸುತ್ತು ಕೋಣ ಮತ್ತು ಮರಿಕೋಣನ್ನು ತಿರುಗಿಸಿ ಬಳಿಕ ಗ್ರಾಮದ ತೇರುಬೀದಿ ಮತ್ತು ಕೇರಿಕೇರಿಗಳಿಗೆ ಕೋಣ, ಮರಿಕೋಣಗಳನ್ನು ಮೆರವಣಿಗೆ ಕರೆದೊಯ್ದರು, ಪ್ರತಿ ಮನೆಮನೆಗಳಲ್ಲೂ ಕೋಣಗಳಿಗೆ ಪೂಜೆ ಸಲ್ಲಿಸಲಾಯಿತು. ಇಲ್ಲಿನ ಗ್ರಾಮ ದೇವತೆಗೆ ಹೂವಿನ ಅಲಂಕಾರ ಪೂಜೆ, ಪುನಸ್ಕಾರಗಳು ನಡೆದವು. ಗ್ರಾಮ ಸಮಿತಿ, ಜಾತ್ರಾ ಸಮಿತಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post