ಕಲ್ಪ ಮೀಡಿಯಾ ಹೌಸ್ | ಸೊರಬ |
ಅಭಿವೃದ್ಧಿ ಹೆಸರಿನಲ್ಲಿ ಕೃಷವಾಗುತ್ತಿರುವುದು ಬಡಜನತೆ, ಬಡ ಜನತೆಯನ್ನು ಕೂಪಕ್ಕೆ ತಳ್ಳಿ ಮೋಜು ನೋಡುವ ಕಾಯಕ ಆಡಳಿತದ್ದು ಎಂಬ ಬೇಸರಿಕೆಯ ನುಡಿ ಬಸ್ತಿಕೊಪ್ಪ ಗ್ರಾಮಸ್ಥರಿಂದ ಕೇಳಿಬಂತು.
ಬಸ್ತಿಕೊಪ್ಪ ಕಲ್ಲುಕ್ವಾರೆಯಿಂದ ಗ್ರಾಮದ ಜನತೆಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ಮನವಿಯ ಹಿನ್ನೆಲೆಯಲ್ಲಿ ಆಗಮಿಸಿದ್ದ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರೊಂದಿಗೆ ತಮ್ಮ ಬವಣೆ ತೋಡಿಕೊಂಡರು.
ಅಧಿಕೃತ ಎಂದುಕೊಳ್ಳುತ್ತ ಇಲ್ಲಿನ ಮೂಲ ನಿವಾಸಿಗಳನ್ನು ಬೆದರಿಸಿ ಅನುಮತಿ ಇದ್ದುದಕ್ಕಿಂತಲೂ ಹೆಚ್ಚು ಕಲ್ಲು ಸಾಗಾಣಿಕೆ ನಡೆದಿದೆ, ಅಪಾರ ಪ್ರಮಾಣದ ದೂಳಿನಿಂದಾಗಿ ಇಲ್ಲಿ ಅಸ್ತಮ, ಕೆಮ್ಮ, ಹೃದ್ರೋಗದಂತಹ ಕಾಯಿಲೆಗಳು ಕಾಣಿಸಿಕೊಂಡಿದೆ. ಬೋರ್‌ವೆಲ್‌ನ ಇದ್ದ ನೀರೂ ಇಂಗಿಹೋಗಿದ್ದು ಕುಡಿಯುವ ನೀರು ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Also read: ಚಂದ್ರಗುತ್ತಿ: ಶಾಂತಿಯುತ ಮಾರಿಜಾತ್ರೆ ಆಚರಣೆಗೆ ಅಸಾದಿ ರಾಜಮೂಗೂರು ಕರೆ
ಕೃಷಿ ಭೂಮಿಗೆ ಕಲ್ಲಿನ ಅಪಾರ ತುಣುಕು ಮತ್ತು ದೂಳು ಸೇರಿ ಕೃಷಿ ಚಟುವಟಿಕೆಯಲ್ಲೂ ಹಿನ್ನೆಡೆ ಆಗಿದೆ. ಭೂ ಮಟ್ಟದಿಂದ 100ಕ್ಕೂ ಅಧಿಕ ಅಡಿ ಕೊಳವೆ ಕೊರೆದು ಸ್ಫೋಟ ನಡೆಸುತ್ತಿರುವುದರಿಂದ ಮನೆಯ ಗೋಡೆಯಲ್ಲಿ ಭಿರುಕು ಕಾಣಿಸಿಕೊಂಡಿದೆ. ಇಡೀ ಗ್ರಾಮದಲ್ಲಿ ಪ್ರತಿ ದಿನ ಭೂಕಂಪದಂತಹ ಅಲುಗಾಟ ಸಂಭವಿಸುತ್ತಿದೆ. ಸ್ಫೋಟಗೊಂಡ ಬಳಿಕ ಏಳುವ ದೂಳಿನಿಂದ ಮಕ್ಕಳು, ವೃದ್ಧರು ಉಸಿರಾಡುವುದಕ್ಕೆ ತೊಂದರೆ ಪಡುತ್ತಿದ್ದಾರೆ. ದಿನಕ್ಕೆ 500-600 ಭರಾಸ್ ಕಲ್ಲು ತೆಗೆದು ಭಾರಿ ವಾಹನದ ಮೂಲಕ ಸಾಗಿಸುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಯಾರಿಗಾದರೂ ಕಾಯಿಲೆ ಕಂಡರೆ ಕಂಬಳಿಯಲ್ಲಿ ಹೊತ್ತು ಸಾಗಿಸಬೇಕಾದ ಅನಿವಾರ್ಯತೆ ಇದೆ. ಗಣಿಗಾರಿಕೆ ನಡೆಯುತ್ತಿರುವ ಸನಿಹದಲ್ಲೆ ರಿಸರ್ವ್ ಫಾರೆಸ್ಟ್ ಇದ್ದು, ಅಲ್ಲಿನ ವೃಕ್ಷ, ಪ್ರಾಣಿಗಳಿಗೆ ತೊಂದರೆ ಉಂಟಾಗಿದೆ. ಕಲುಷಿತ ನೀರಿನಿಂದಾಗಿ ಜಲಮಾಲಿನ್ಯ, ಮೀನುಗಳ ಕೊರತೆ ಉಂಟಾಗಿದೆ. ಇದೇ ರೀತಿ ಮುಂದುವರೆದರೆ ಮುಂದೊಮ್ಮೆ ಈ ಗ್ರಾಮ ಮತ್ತು ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ರೇಣುಕಾಂಬ ಶಿಲಾಮಯ ದೇಗುಲ ಕೇವಲ ದಾಖಲೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂಬ ಹತಾಶೆ ವ್ಯಕ್ತಪಡಿಸಿದರು.
ಸ್ಥಳ ಪರಿಶೀಲನೆಯ ವೇಳೆ ಇಡೀ ಊರಿಗೆ ಊರೆ ನೆರೆದಿತ್ತು, ರಾಜ್ಯ ಜೀವವೈವಿಧ್ಯ ಮಂಡಳಿಯ ಉಪಸಮಿತಿಯ ತಜ್ಞ ಶ್ರೀಪಾದ ಬಿಚ್ಚುಗತ್ತಿ, ಚಂದ್ರಗುತ್ತಿ ಗ್ರಾಮದ ದಿನೇಶ್ ಅಂಚೆ, ಪ್ರಸನ್ನಶೇಟ್, ಗ್ರಾಪಂ ಸದಸ್ಯ ಸಲೀಂ, ಪಾಂಡುರಾಘು, ಬಸ್ತಿಕೊಪ್ಪದ ಲಕ್ಷ್ಮೀ, ಕನ್ನಮ್ಮ, ಕೆರೆಯಮ್ಮ, ದೇವಕಿ, ವೀಣಾ, ಸುಶೀಲ, ನೂರ್ ಅಹಮದ್, ಇನ್ನೂ ಅನೇಕರಿದ್ದರು.
ನಂತರ ಚಂದ್ರಗುತ್ತಿ ಗ್ರಾಪಂ ಕಛೇರಿಯಲ್ಲಿ ಜೀವವೈವಿಧ್ಯ ಸಮಿತಿಯಲ್ಲಿ ಕಲ್ಲು ಗಣಿಗಾರಿಕೆಯೂ ಸೇರಿದಂತೆ ಪರಿಸರ ಮಾಲಿನ್ಯ, ನೀರು ಸಮಸ್ಯೆ ಮುಂತಾದ ಜಠಿಲ ಸಮಸ್ಯೆಯ ಕುರಿತು ಚರ್ಚೆ, ನಿರ್ಣಯ ಕೈಗೊಳ್ಳಲಾಯಿತು.
ಗ್ರಾಪಂ ಅಧ್ಯಕ್ಷ ಎಂ.ಪಿ.ರತ್ನಾಕರ, ಗ್ರಾಪಂ ಜೀವವೈವಿಧ್ಯ ಸಮಿತಿ ಅಧ್ಯಕ್ಷ ದತ್ತುಹೆಗಡೆ, ಪಿಎಸ್‌ಸಿ ವೈದ್ಯೆ ಡಾ. ಶಕುಂತಲ, ಆರೋಗ್ಯ ಸಹಾಯಕಿ ಮಲ್ಲಮ್ಮ, ವಲಯಾರಣ್ಯಾಧಿಕಾರಿ ಪ್ರಭುರಾಜಪಾಟೀಲ್, ಸದಸ್ಯೆ ಲಕ್ಷ್ಮೀಚಂದ್ರಪ್ಪ, ಲಕ್ಷ್ಮಣಪ್ಪ, ಪ್ರವೀಣ್ ಮಿರ್ಜಿ ವಿವಿಧ ಇಲಾಖೆಯವರು, ಗ್ರಾಪಂ ಪಿಡಿಒ ಈಶ್ವರ, ಸಿಬ್ಬಂದಿ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post