ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಚುನಾವಣೆ ಪೂರ್ವವೇ ನಮ್ಮ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಚಿತ್ರದುರ್ಗದಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವು ಯಾದವ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲರ ತಾಲೂಕು ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸುಮಾರು ಮೂರು ಸಾವಿರ ಮನೆ ಮಂಜೂರು ಮಾಡಿದೆ. ಆದರೆ ಸರಕಾರ ನೀಡುವ ಅನುದಾನ ಮನೆಯ ತಳಪಾಯಕ್ಕೂ ಹಾಕಲು ಸಾಕಾಗುವುದಿಲ್ಲ. ಇಂತಹ ಕಣ್ಣೊರೆಸುವ ತಂತ್ರ ಸಲ್ಲದು ಎಂದರು.
Also read: ಜೈಪುರ: ಕಾಲೇಜು ಆವರಣದಲ್ಲೆ ಕೋಲು ಹಿಡಿದು ಬಡಿದಾಡಿಕೊಂಡ ವಿದ್ಯಾರ್ಥಿಗಳು

ರಾಜ್ಯದಲ್ಲಿ ಸುಮಾರು 35ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕಾಡುಗೊಲ್ಲ ಜನಾಂಗ ವಾಸ ಮಾಡುತ್ತಿದ್ದೇವೆ. ಆದರೆ ಪೂರ್ಣಿಮಾ ಅವರು ಶಾಸಕರು ಆಗುವುದಕ್ಕೂ ಪೂರ್ವ ಕಾಡುಗೊಲ್ಲರ ಬೇಡಿಕೆಗಳನ್ನು ಪೂರೈಸುವುದಾಗಿ ಭರವಸೆ ನೀಡಿ ಮತಗಳನ್ನು ಗಿಟ್ಟಿಸಿಕೊಂಡು ಈಗ ಸರಕಾರದಲ್ಲಿ ಇವರೇ ತೊಡಕು ಉಂಟುಮಾಡುತ್ತಿದ್ದಾರೆ. ನಮ್ಮ ಸಮುದಾಯದಲ್ಲಿ ಹುಟ್ಟಿ ನಮ್ಮ ಮತಗಳಿಂದ ಅಧಿವೇಶನಕ್ಕೆ ಆಯ್ಕೆಯಾದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಮ್ಮ ಸಮುದಾಯಕ್ಕೇ ಮುಳುವಾಗಿದ್ದಾರೆ ಆರೋಪಿಸಿದ್ದಾರೆ.

ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿ, ಕಳೆದ ಬಾರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಾವಧಿಯಲ್ಲಿ ಪರಿಶಿಷ್ಟ ಪಂಗಡದ ಜಾತಿ ಜೊತೆಗೆ ಸೇರ್ಪಡೆ ಮಾಡಲು ಶಿಪರಾಸ್ಸು ಮಾಡಿದ್ದರು. ಆದರೆ ಈಗಿನ ಆಡಳಿತಾರೂಢ ಕೇಂದ್ರ ಹಾಗೂ ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿವೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ಮುಖಂಡ ಶಿವಣ್ಣ ಮಾತನಾಡಿ, ಕಾಡುಗೊಲ್ಲ ಜನಾಂಗದಲ್ಲಿ ಕಂದಾಚಾರ ಪದ್ಧತಿ ಇನ್ನೂ ಜೀವಂತವಾಗಿದೆ. ಇಂತಹ ಅನಿಷ್ಠ ಪದ್ದತಿಗಳನ್ನು ಮೊದಲು ನಾವು ಕೈ ಬಿಡಬೇಕು. ತದನಂತರ ನಮ್ಮ ಹಕ್ಕು ಪಡೆಯಲು ಸರಕಾರದ ಮೊರೆ ಹೊಗೋಣ ಎಂದಿದ್ದಾರೆ.
ತಾಲೂಕು ಕಾಡುಗೊಲ್ಲರ ಮುಖಂಡ ಚಿಕ್ಕಣ್ಣ ಮಾತನಾಡಿ, ಗೊಲ್ಲರ ಹಟ್ಟಿಗಳಲ್ಲಿ ಉನ್ನತ ಶ್ರೇಣಿಯ ಹುದ್ದೆಯಲ್ಲಿರುವ ಯಾರೊಬ್ಬರು ರಾಜಕೀಯದಲ್ಲಿ ಇಲ್ಲ. ಇಂತಹ ಶೋಚನೀಯ ಸಮಾಜದಲ್ಲಿ ನಮ್ಮ ಜಾತಿಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.


ಮುಖಂಡ ಕಾಂತರಾಜ್ ಮಾತನಾಡಿ, ರಾಜಕೀಯದಲ್ಲಿ ಯಾವ ಪಕ್ಷ ಕಾಡುಗೊಲ್ಲ ಸಮುದಾಯಕ್ಕೆ ಸ್ಥಾನಮಾನ ನೀಡುತ್ತದೆ, ಅಂತಹ ಪಕ್ಷವನ್ನು ನಾವು ಪರಿಗಣಿಸಬೇಕು. ನಮ್ಮ ಸ್ಥಾನಮಾನ ಸಿಗುವವರೆಗೂ ಹೋರಾಟ ಮಾಡಬೇಕು ಧ್ವನಿ ಇಲ್ಲದ ಇಂತಹ ಸಮಾಜದಲ್ಲಿ ಕಾಡುಗೊಲ್ಲ ಸಮುದಾಯ ಅವಕಾಶದಿಂದ ವಂಚಿತವಾಗಿದೆ ಎಂದರು.
ನೂತನವಾಗಿ ತಾಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಕೀಲರಾದ ತಮ್ಮಣ್ಣ ಮಾತನಾಡಿ, ಕಾಡುಗೊಲ್ಲ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೆ ಕಾಲ ವಿಳಂಬ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಧ್ವನಿ ಎತ್ತಲು ಕಾಡುಗೊಲ್ಲ ಸಮುದಾಯ ಒಂದಾಗಿ ಹೋರಾಟ ಮಾಡಬೇಕು, ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರಕಾರದ ಗಮನ ಸೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶಿವಣ್ಣ, ವಕೀಲ ತಮ್ಮಣ್ಣ, ಕಾಂತರಾಜ್, ವೀರೇಶ್, ಚಿಕ್ಕಣ್ಣ, ಮಂಜುನಾಥ್, ಲಕ್ಷ್ಮೀಕಾಂತ್, ಚಕ್ರಪಾಣಿ, ಶಿವಲಿಂಗಪ್ಪ, ಸಿದ್ದರಾಜ್, ವೀರೇಶ್ ಇತರರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news


















