ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಾನು ಎಂಎಲ್’ಎ ಆಗಲು ಸಂಘಟನೆ ಮಾಡುತ್ತಿಲ್ಲ. ಬದಲಾಗಿ, ಯಾವುದೇ ಅಪೇಕ್ಷೆಯಿಲ್ಲದೇ ಪಕ್ಷಕ್ಕಾಗಿ ಸಂತೃಪ್ತಿಯಿಂದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪೇಜ್ ಪ್ರಮುಖ್ ಸಭೆ ಪಕ್ಷದ ಕರೆಯಂತೆ ಎರಡು ದಿನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಮಹೋತ್ಸವ ದೇಶದ ದೊಡ್ಡ ಹಬ್ಬವಾಗಿ ಆಚರಿಸಲು ಕರೆ ನೀಡಿದ್ದಾರೆ. ಅದರಂತೆ ಎಲ್ಲರೂ ಆಚರಿಸಲು ಸಿದ್ದರಾಗಿದ್ದೇವೆ.
ಯುವಕರಲ್ಲಿ ದೇಶಭಕ್ತಿ ಹೆಚ್ಚಿಸಲು ಹಬ್ಬದ ರೀತಿ ಆಚರಣೆಗೆ ಕರೆ ನೀಡಲಾಗಿದ್ದು, 20 ಕೋಟಿ ಮನೆಗಳ ಮೇಲೆ ಧ್ವಜ ಹಾರಲು ಸಿದ್ದವಾಗಿದೆ. ರಾಜ್ಯದಲ್ಲೂ 58 ಸಾವಿರ ಬೂತ್ ಕೇಂದ್ರದಲ್ಲೂ ಅರ್ಥಪೂರ್ಣ ಆಚರಣೆಗೆ ಸಿದ್ದತೆ ನಡೆದಿದೆ ಎಂದಿದ್ದಾರೆ.
ಸ್ವಾತಂತ್ರ ನೆನಪಿನಲ್ಲಿ ಈಸೂರನ್ನು ಮರೆಯಲು ಅಸಾಧ್ಯ. ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ ಘೋಷಣೆ ಮಾಡಿಕೊಂಡ ಈ ಗ್ರಾಮದಲ್ಲಿ ಅರ್ಥಪೂರ್ಣ ಆಚರಣೆ ಆಗಬೇಕು ಎಂಬ ಕಾರಣದಿಂದ ಸರಣಿ ಸಭೆಗಳನ್ನು ನಡೆಸಲಾಗಿದೆ. ಎಲ್ಲರ ಸಲಹೆ ಪಡೆದು ಕಾರ್ಯ ಯೋಜನೆ ಮಾಡಲಾಗುತ್ತಿದ್ದು, ಪ್ರಧಾನಿಯವರ ಕರೆಯನ್ನು ಯಶಸ್ವಿಗೊಳಿಸಲು ಭಾರತ ಮೊದಲು ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ಸಂಕಲ್ಪಿತರಾಗಿದ್ದೇವೆ ಎಂದರು.
ಇನ್ನು, ನಾನು ಈ ಹಿಂದೆಯೂ ಬಹಳಷ್ಟು ಪ್ರವಾಸ ಮಾಡಿದ್ದೇನೆ. ಈಗ ಅಧಿಕಾರಕ್ಕಾಗಿ ಸಂಘಟನೆ ಮಾಡುತ್ತಿದ್ದೇನೆ ಎನ್ನುವುದು ಸುಳ್ಳು. ನನ್ನ ಸ್ಪರ್ಧೆಯನ್ನು ತಂದೆಯವರು ಘೋಷಣೆ ಮಾಡಿದ್ದರೂ, ಪಕ್ಷದ ಮುಖಂಡ ಒತ್ತಾಯದ ಮೇರೆಗೆ ಹೇಳಿದ್ದು. ಕೊನೆಯಲ್ಲಿ ಪಕ್ಷದ ತೀರ್ಮಾನವೇ ನಮಗೆ ಅಂತಿಮ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















