ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಮಾವಲಿ ಗ್ರಾಮದ ಶ್ರೀ ಉಮಾಮಹೇಶ್ವರ ಗ್ರಾಮಾಂತರ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಆಡಳಿತ ಮಂಡಳಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಯಾವುದೇ ಸದಸ್ಯರು ಇಲ್ಲವಾಗಿದ್ದು, ಸಂಪೂರ್ಣವಾಗಿ ಆಡಳಿತ ಮಂಡಳಿಯು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಆರೋಪಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿರಿರುವ ಶಾಲಾ ಆಡಳಿತ ಮಂಡಳಿಯ ಮಾನ್ಯತೆಯನ್ನು ರದ್ದುಪಡಿಸಬೇಕು. ಹಾಗೂ ಮುಂದಿನ ಏಳು ದಿನಗಳಲ್ಲಿ ಎಸ್.ಜೆ. ರಾಮಚಂದ್ರ ಅವರಿಗೆ ಮುಂಬಡ್ತಿ ನೀಡಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಾಲೆಯ ಮುಖ್ಯಶಿಕ್ಷಕರೊಬ್ಬರು ವಯೋ ನಿವೃತ್ತಿಹೊಂದಿದ್ದು, ಮುಖ್ಯ ಶಿಕ್ಷಕ ಹುದ್ದೆಗೆ ಪದೋನ್ನತಿ ಪಡೆಯಲು ಅರ್ಹತೆ ಇದ್ದರೂ ಪರಿಶಿಷ್ಟ ಜಾತಿಯ ಅಭ್ಯರ್ಥಿ ಎನ್ನುವ ಕಾರಣಕ್ಕೆ ಮುಂಬಡ್ತಿ ನೀಡಲು ಶಾಲಾ ಆಡಳಿತ ಮಂಡಳಿ ತಾರತಮ್ಯ ಮಾಡಲಾಗುತ್ತಿದೆ. ಖಾಲಿ ಇರುವ ಹುದ್ದೆಗೆ ಮುಂಬಡ್ತಿ ನೀಡುವಂತೆ ಎನ್.ಪಿ. ಅರುಣಕುಮಾರ ಹಾಗೂ ಎಸ್.ಜೆ. ರಾಮಚಂದ್ರ ಅವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಇಬ್ಬರೂ ಸಹ ಒಂದೇ ದಿನ ಅನುದಾನ ಸಹಿತ ಮುಂಬಡ್ತಿ ಹೊಂದಿರುವುದರಿಂದ ಸ್ಪಷ್ಟಿಕರಣ ನೀಡುವಂತೆ ಕೋರಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಯೋ ಹಿರಿತನದ ಆಧಾರದ ಮೇಲೆ ಎಸ್.ಜೆ. ರಾಮಚಂದ್ರ ಅವರಿಗೆ ಮುಂಬಡ್ತಿ ನೀಡಲು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು. ಜೊತೆಗೆ ಇಲಾಖಾ ಆಯುಕ್ತರು ಸಹ ಜನ್ಮ ದಿನಾಂಕದ ಜೇಷ್ಠತೆ ಆಧಾರದಲ್ಲಿ ಮುಂಬಡ್ತಿ ನೀಡುವಂತೆ ತಿಳಿಸಿದ್ದರೂ ಸಹ ಆಡಳಿತ ಮಂಡಳಿ ಆದೇಶವನ್ನು ಉಲ್ಲಂಘಿಸಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ತಾಲೂಕು ಸಂಘಟನಾ ಸಂಚಾಲಕ ನಾಗರಾಜ್ ಹುರಳಿಕೊಪ್ಪ ಉಪಸ್ಥಿತರರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















