ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಹಬ್ಬಗಳಂತಹ ವಿಶೇಷ ಸಂದರ್ಭದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಸ್ಥಳಗಳನ್ನು ಗುರುತಿಸಿ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಸುಮೇರ್ ಖಾನ್ ಒತ್ತಾಯಿಸಿದರು.
ಈ ಕುರಿತಂತೆ ಮಾತನಾಡಿದ ಮನವಿ ಮಾಡಿರುವ ಅವರು, ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಸಂತೇ ಮೈದಾನಕ್ಕೆ ಸ್ಥಳಾಂತರಿಸಿರುವುದರಿಂದ ಬೀದಿ ಬದಿ ವ್ಯಾಪಾರವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ ಎಂದು ಅಳಲು ತೋಡಿಕೊಂಡರು.
ಗೌರಿ ಗಣೇಶ ಹಬ್ಬದಂದು ಸಾಲ ಸೂಲ ಮಾಡಿ ಐದು ಸಾವಿರಕ್ಕೂ ಹೆಚ್ಚು ಬಂಡವಾಳ ಹಾಕಿ, ಉತ್ತಮ ವ್ಯಾಪಾರವಾಗುವುದೆಂದು ನಂಬಿ ಹಣ್ಣು ಗಾಡಿ ಹಾಕಿದ ಖಾಸಿಮರಂತಹ ವ್ಯಾಪಾರಿಯಿಂದ ಆರಂಭವಾಗಿ ಹೂವು ಮಾರುವ ವೇದರವರೆಗೆ ಸಂತೇ ಮೈದಾನದಲ್ಲಿ ವ್ಯಾಪಾರ ಹಾಕಿರುವುದರಿಂದ ಮಧ್ಯಾಹ್ನವಾದರೂ ಬೋಣಿಗೆಯನ್ನೇ ಕಾಣದೆ ಕಂಗಲಾಗಿದ್ದಾರೆ. ಮಧ್ಯಾಹ್ನವಾದರೂ ವ್ಯಾಪಾರವಾಗದೆ ಬಂಡವಾಳಕ್ಕೆ ಮಾಡಿರುವ ಸಾಲ ಹೇಗೆ ತೀರಿಸುವುದೆಂದು ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದರೆ, ಒಬ್ಬ ವ್ಯಾಪಾರಿಯಿಂದ ತಲಾ 10 ರೂ.ಗಳ ಕರ ವಸೂಲಿಗೆ ಹರಾಜು ಕೂಗಿರುವ ಗುತ್ತಿಗೆದಾರರು ಮನಸೋಇಚ್ಚೆ ತಲಾ 50 ರೂಪಾಯಿಗಳವರೆಗೆ ದಬ್ಬಾಳಿಕೆಯಲ್ಲಿ ಕರ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
Also read: ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಟಿವಿ ಕಪಾಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ
ಸಂತೇ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಮಲಮೂತ್ರಗಳಿಂದ ಹಾಗೂ ಸಂತೇ ಮೈದಾನದ ಅವ್ಯವಸ್ಥೆಯಿಂದಾಗಿ ಮೂಗು ಮುಚ್ಚಿಕೊಂಡು ಬೇರೆ ವಿಧಿ ಇಲ್ಲದೆ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರೆ, ಇತ್ತ ಗ್ರಾಹಕರು ಕೊಳಕು ಸಂತೇ ಮೈದಾನಕ್ಕೆ ಬಾರದೆ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಸಂತೇ ಮೈದಾನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ವ್ಯಾಪಾರಿಗಳಲ್ಲಿ ಮಹಿಳೆಯರು ಇದ್ದು ನೈಸರ್ಗಿಕ ಕರೆಗೆ ಪರದಾಡುವಂತಾಗಿದೆ ಎಂದಿದ್ದಾರೆ.
ಇನ್ನಾದರೂ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಬಡ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟವನ್ನು ಅರಿತು, ಮುಂದೆ ಬರುವ ಆಯುಧಪೂಜೆ, ದೀಪಾವಳಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸ್ಥಳ ಗುರುತಿಸಿ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















