ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ಗ್ರಾಮಾಂತರ |
ಜಿಲ್ಲೆಯ ಪುರಸಭೆ, ನಗರಸಭೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ, ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಬೇಕು. ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ಅವರು ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ನಡೆದ ರಾಷ್ಟ್ರೀಯ ಹಸಿರು ನ್ಯಾಯ ಪೀಠವು ನೀಡಿರುವ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಣೆಯ ನಿಯಮಾವಳಿಗಳು-2016ರಲ್ಲಿ ತಿಳಿಸಿರುವಂತೆ ಘನತ್ಯಾಜ್ಯ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಯುಎಲ್‍ಬಿಗಳಲ್ಲಿ ಸಮರ್ಪಕ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಬೇಕು. ಸಾರ್ವಜನಿಕರು ಮನೆಯಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಲ್ಲಿಯೇ ಹಾಕಬೇಕು. ಸ್ವಚ್ಛತಾ ಕ್ರಮಗಳ ಪಾಲನೆ ಕುರಿತು ಕರಪತ್ರಗಳು, ಭಿತ್ತಿಪತ್ರಗಳ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನ್ವಯ ಸಾರ್ವಜನಿಕರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.

Also read: ಬದುಕಿಗೆ ಛಲ ಮುಖ್ಯ, ಸಾಧನೆಗೆ ಛಲವೇ ಅಡಿಪಾಯ: ಪ್ರೊ. ಹೂವಯ್ಯಗೌಡ ಕಿವಿಮಾತು
ಪೌರ ಕಾರ್ಮಿಕರು ವಾಹನದ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿಬೇಕು. ಈ ವೇಳೆ ತ್ಯಾಜ್ಯ ಬೇರ್ಪಡಿಸಿಬೇಕು. ಬೀದಿ ಬದಿ ಹಾಗೂ ಸಂತೆಯ ವ್ಯಾಪಾರಿಗಳು ಸಂಜೆ ವೇಳೆ ಕಸವನ್ನು ರಸ್ತೆ ಬದಿಗೆ ಎಸೆದು ಹೋಗುತ್ತಾರೆ, ಇದನ್ನು ನಿಯಂತ್ರಿಸಲು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಸ್ವಚ್ಚತೆಯ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಚಿಂದಿ ಆಯುವವರನ್ನು, ಸ್ವ-ಸಹಾಯ ಗುಂಪುಗಳನ್ನು ಘನತ್ಯಾಜ್ಯ ನಿರ್ವಹಣೆಯಲ್ಲಿ ಪಾಲುದಾರರಾಗಿ ಮಾಡಿಕೊಂಡು, ಹಸಿರು ನ್ಯಾಯ ಪೀಠದ ಆದೇಶದಂತೆ ಮೇಟೀರಿಯಲ್ ರಿಕೋವಲ್ ಫೆಸಿಲಿಟಿ ಅಥವಾ ಸೆಕೆಂಡ್ ಸ್ಟೋರೇಜ್ ಸ್ಥಾಪಿಸಿರುವ ಕುರಿತು, ವಿಕೇಂದ್ರಿಕೃತ ಸಂಸ್ಕರಣಾ ಘಟಕಗಳನ್ನು ಅಳವಡಿಸಬೇಕು, ಎಲ್ಲಾ ನಗರಸಭೆ/ಪುರಸಭೆಗಳಲ್ಲಿ ಪಾರ್ಕ್ ಉದ್ಯಾನವನಗಳಲ್ಲಿ ರಾಸಾಯನಿಕ ಗೊಬ್ಬರ ಬಳಸದಂತೆ ಕ್ರಮವಹಿಸಬೇಕು ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ನಿಯಮ 2016ರಂತೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಳೀಯ ಸಂಸ್ಥೆಗಳಿಗೆ Environment compensation ದಂಡ ವಿಧಿಸಬೇಕು ಎಂದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ದೇವನಹಳ್ಳಿ ಮತ್ತು ಹೊಸಕೋಟೆಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಅನಿಲ್‌ಕುಮಾರ್, ದೊಡ್ಡಬಳ್ಳಾಪುರದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ರಮೇಶ್.ಕೆ.ಎಂ, ನೆಲಮಂಗಲದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಮರಿಮಾದಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಉಪಸ್ಥಿತರಿದ್ದರು.










Discussion about this post