ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಅಪಾರವಾದ ಕಾವ್ಯ, ಕಥನ ಸಂಪತ್ತು, ಸಾಹಿತ್ಯ ಪ್ರಕಾರಗಳನ್ನುಳ್ಳ ಕನ್ನಡ ಭಾಷಾ ಸಾಹಿತ್ಯವು ಭಾರತೀಯ ಭಾಷೆಗಳು ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಳ್ಳಬೇಕಿದೆ ಎಂದು ಮದ್ರಾಸ್ ವಿವಿಯ ಪ್ರಾಧ್ಯಾಪಕಿ ಡಾ. ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಸಪ್ನ ಬುಕ್ ಹೌಸ್ ವತಿಯಿಂದ ಕುವೆಂಪು ವಿವಿಯ ಪ್ರೊ. ಹಿರೇಮಠ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆಚಾರ್ಯ ಹಂಪನಾ ವಿರಚಿತ ‘ಸ್ಪೆಕ್ಟರ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ ಕರ್ನಾಟಕ-5’ ಕೃತಿಗಳ ಲೋಕಾರ್ಪಣೆ ಮತ್ತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕೃತಿಗಳ ಕುರಿತು ಮಾತನಾಡಿದರು.

ಭಾರತೀಯ ಭಾಷೆಗಳಲ್ಲದೇ ಜಗತ್ತಿನ ಪ್ರಮುಖ ಭಾಷೆಗಳಾದ ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಜರ್ಮನ್ ಭಾಷೆಗಳಿಗೂ ಕನ್ನಡವನ್ನು ಅನುವಾದಿಸಿ, ಕನ್ನಡದ ಜ್ಞಾನಹಿರಿಮೆಯನ್ನು ಎತ್ತಿಹಿಡಿಯಬೇಕು. ಅಂತಹ ಕೆಲಸ ಮಾಡುವವರ ಸಂಖ್ಯೆ ಬಹಳ ವಿರಳವಿದೆ. ಆದರೆ ನಾಡೋಜ ಪ್ರೊ. ಹಂಪನಾ ಅವರು ಇಡೀ ಕನ್ನಡ ಸಾಹಿತ್ಯವನ್ನು ಈ ಐದು ಕೃತಿಗಳ ಮೂಲಕ ಇಂಗ್ಲೀಷ್ ಬಲ್ಲವರಿಗೆ ಸರಳವಾಗಿ, ಸುಲಭವಾಗಿ, ಸವಿವರವಾಗಿ ಅರ್ಥಮಾಡಿಸಬಲ್ಲಂತೆ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Also read: ಮತ್ತೂರು: ವಸತಿ ಸಮುಚ್ಚಯ ಹಾಗೂ ಬಾಲ ಗೋಕುಲ ಲೋಕಾರ್ಪಣೆ
ನಾಡೋಜ ಪ್ರೊ. ಹಂಪನಾ ಮಾತನಾಡಿ, ಕನ್ನಡ ಸಾಹಿತ್ಯ ಇತಿಹಾಸ ಎಂದರೆ ಆದಿಕವಿ ಎಂಬ ಕಾರಣಕ್ಕೆ ಪಂಪನಿಂದ ಆರಂಭಿಸಬೇಡಿ. ಪಂಪನಿಗಿಂತಲೂ 100 ವರ್ಷಕ್ಕಿಂತ ಮೊದಲೇ ಕವಿರಾಜಮಾರ್ಗ ಮೂಲಕ ಶ್ರೀವಿಜಯ ಉತ್ಕೃಷ್ಟ ಸಾಹಿತ್ಯ ನೀಡಿದ್ದನು. ಕನ್ನಡ ಸಾಹಿತ್ಯದಲ್ಲಿ ಹತ್ತಾರು ಪ್ರಕಾರಗಳು ಇದ್ದು, ಸಮಾನತೆ, ವಿಶ್ವಮಾನವ ತತ್ವ, ಸಹೋದರತ್ವಗಳನ್ನು ಬೋಧಿಸಿದ ಅಪಾರವಾದ ಸಂಪತ್ತು ಇದೆ.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಅನುರಾಧ ಜಿ., ವಿಮರ್ಶಕ, ಚಿಂತಕರು ಆದ ಪ್ರೊ. ಪಿ.ವಿ. ನಾರಾಯಣ, ಪ್ರೊ. ಬಸವರಾಜ ಕಲ್ಗುಡಿ, ಪತ್ರಕರ್ತ, ಸಂಸ್ಕೃತಿ ಚಿಂತಕ ಡಾ. ಪದ್ಮರಾಜ ದಂಡಾವತಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊ. ಪ್ರಶಾಂತ್‌ನಾಯಕ ಜಿ., ಪ್ರೊ. ಶಿವಾನಂದ ಕೆಳಗಿನಮನಿ ಸೇರಿದಂತೆ ವಿವಿಧ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.























Discussion about this post