ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಹೆಲ್ತ್ ಪ್ಲಸ್ ಪಾಲಿಸಿ ಹೊಂದಿದ್ದ ಗ್ರಾಹಕರೊಬ್ಬರಿಗೆ ಕ್ಲೇಂ ನಿರಾಕರಿಸಿದ ಕಾರಣ ದಂಡ ಸೇರಿ 1,31,216 ರೂ. ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕ ಆಯೋಗ ಎಲ್’ಐಸಿಗೆ ಸೂಚನೆ ನೀಡಿದೆ.
ಏನಿದು ಪ್ರಕರಣ?
ಎಂಬಿ ನಗರದ ನಿವಾಸಿಗಳಾದ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿಗಳು ತಾವು ಈ ಹಿಂದೆ 2008ರ ಅ. 30ರಂದು 10 ವರ್ಷದ ಅವಧಿಯ ಎಲ್’ಐಸಿ ಹೆಲ್ತ್ ಪ್ಲಸ್ ಪಾಲಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು. ಶ್ರೀದೇವಿ ಅವರು 2008ರ ಅ. 30ರಂದು ಎಸ್’ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216/- ಭರಿಸಿ ಶಸ್ತ್ರಚಿಕಿತ್ಸೆ ಪಡೆದಿದ್ದು, ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್’ಐಸಿ ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಂ ಅರ್ಜಿ ಸಲ್ಲಿಸಿದ್ದರು.
ಆದರೆ ಎಲ್’ಐಸಿ ಯು ತಮ್ಮ ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿ, ಸೇವಾ ನ್ಯೂನ್ಯತೆ ಎಸಗಿದೆ ಎಂದು ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ. ಕ. ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ಎಲ್’ಐಸಿಯು ಫಿರ್ಯಾದಿದಾರರು ಪಾಲಸಿ ಹೊಂದಿದ್ದರೂ, ಅವರಿಗೆ ಸರಿಯಾಗಿ ಸ್ಪಂದಿಸದೆ ಸೇವಾ ನ್ಯೂನ್ಯತೆ ಎಸಗಿದೆ ಎಂಬ ಅಭಿಪ್ರಾಯಪಟ್ಟಿದೆ. ಅಲ್ಲದೇ, ದೂರುದಾರರ ವೈದ್ಯಕೀಯ ವೆಚ್ಚ ರೂ.79216 ಗಳನ್ನು ಮತ್ತು ಅವರ ಕ್ಲೇಂ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ.8% ಬಡ್ಡಿ ಸಮೇತ ಕೊಡಬೇಕು ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ, ಅನಾನುಕೂಲತೆಗಾಗಿ ರೂ.50 ಸಾವಿರಗಳ ಪರಿಹಾರದ ಜೊತೆಗೆ ಪ್ರಕರಣದ ಖರ್ಚು ಬಾಬ್ತು ರೂ.10 ಸಾವಿರಗಳನ್ನು ಕೊಡಬೇಕು ಎಂದು ತೀರ್ಪು ನೀಡಿ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















