ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಮುಖ್ಯರಸ್ತೆಯ ಸುರಭಿ ವಾಣಿಜ್ಯ ಸಂಕೀರ್ಣದ ಮುಂಭಾಗ ಫುಟ್‌ಪಾತ್‌ನಲ್ಲಿದ್ದ ವ್ಯಾಪಾರಸ್ಥರನ್ನು ಪುರಸಭೆಯಿಂದ ತೆರವು ನಡೆಸಲು ಮುಂದಾದ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಪುರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿಯಾದ ಘಟನೆ ಗುರುವಾರ ನಡೆಯಿತು.
ಕಳೆದ ಎರಡು ದಿನಗಳ ಹಿಂದೆ ಸುರಭಿ ವಾಣಿಜ್ಯ ಸಂಕೀರ್ಣದಲ್ಲಿನ ಬಾಡಿಗೆದಾರರಿಗೆ ಈ ಹಿಂದೆಯೇ ಪುರಸಭೆಯಿಂದ ತಿಳುವಳಿಕೆ ನೋಟಿಸ್ ನೀಡಿ, ಮಳಿಗೆಗಳನ್ನು ಖಾಲಿ ಮಾಡಿಸಲಾಗಿತ್ತು. ಹಣ್ಣು, ಹೂವು, ಎಲೆ-ಅಡಿಕೆ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದವರು ದಿಕ್ಕು ತೋಚದಂತಾಗಿದ್ದರು. ಈ ಹಿನ್ನೆಲೆ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಫುಟ್ಪಾತ್ ಮೇಲೆ ಈ ಹಿಂದೆಯೇ ಖರೀದಿಸಿದ್ದ ಹಣ್ಣು, ಹೂವುಗಳನ್ನು ವ್ಯಾಪಾರಕ್ಕೆ ಅಣಿಯಾಗುತ್ತಿದ್ದರು. ಪುರಸಭೆ ಅಧಿಕಾರಿಗಳು ಪುನಃ ತೆರವುಗೊಳಿಸಲು ಮುಂದಾದ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತರಾಟೆಗೆ ತಗೆದುಕೊಂಡರು.
ಮನವಿಗೆ ಸ್ಪಂದಿಸದ ಮುಖ್ಯಾಧಿಕಾರಿ:
ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳುವ ವರೆಗೆ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಪಕ್ಷಗಳ ಪ್ರಮುಖರು ಮತ್ತು ವ್ಯಾಪಾರಸ್ಥರು ಪುರಸಭೆಯ ಕಚೇರಿಯಲ್ಲಿ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಅವರಲ್ಲಿ ಮನವಿ ಮಾಡಿದರು. ಆದರೆ, ಪುರಸಭೆ ಮುಖ್ಯಾಧಿಕಾರಿ ಮೇಲಧಿಕಾರಿಗಳ ಆದೇಶ ಪಾಲಿಸಿದ್ದೇನೆ. ವ್ಯಾಪಾರಿಗಳು ದಾಖಲೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಅಥವಾ ಮೇಲಧಿಕಾರಿಗಳ ಗಮನಕ್ಕೆ ತರಬಹುದು. ಸುರಭಿ ವಾಣಿಜ್ಯ ಮಳಿಗೆಯ ಮುಂಭಾಗದ ಫುಟ್ಪಾತ್ನಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
Also read: ಸಿಲಿಕಾನ್ ಸಿಟಿ ಜನತೆಯಲ್ಲಿ ಆತಂಕ ಮೂಡಿಸಿದ ಚಿರತೆ: ಎಚ್ಚರಿಕೆಯಿಂದ ಇರಲು ಸೂಚನೆ
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಸುಲ್ತಾನಬೇಗಂ, ಕಾಂಗ್ರೆಸ್ ಮುಖಂಡರಾದ ಎಚ್. ಗಣಪತಿ, ಪರಶುರಾಮ ಸಣ್ಣಬೈಲ್, ಆಹ್ಮದ್ ಶರೀಫ್, ಸುರೇಶ್, ಸಿರಾಜುದ್ದೀನ್, ಅಮೀರ್ಜಾನ್, ಜಿ. ಕೆರಿಯಪ್ಪ, ಮೆಹಬೂಬ್ ಬಾಷಾ, ಮುದಾಸೀರ್, ಜಾವೀದ್ ಆಹ್ಮದ್ ಸೇರಿದಂತೆ ಮತ್ತಿತರರಿದ್ದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಮಾತನಾಡಿ, ಸುರಭಿ ವಾಣಿಜ್ಯ ಮಳಿಗೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸುಕೊಂಡು ಜೀವನ ಸಾಗಿಸುತ್ತಿದ್ದವರಿಗೆ ದಿಢೀರನೇ ತೆರವು ಮಾಡಲಾಗಿದೆ. ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿ, ವ್ಯಾಪಾರಸ್ಥರು ಲಕ್ಷಾಂತರ ರೂ., ನಷ್ಟ ಅನುಭವಿಸುವಂತಾಗಿದೆ. ಇದೀಗ ಫುಟ್ಪಾತ್ ಮೇಲೆ ವ್ಯಾಪಾರಕ್ಕೂ ಅಡ್ಡಿ ಪಡಿಸುತ್ತಿರುವುದು ಅಮಾನವೀಯ ಘಟನೆ ಎಂದು ಆರೋಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post