ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರ್ನಾಟಕ ಈಗ ಜಾತಿ, ಸಮುದಾಯಗಳ ಪಾಲಿಗೆ ಹಕ್ಕೊತ್ತಾಯದ, ಆ ಮೂಲಕ ಸರ್ಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನದ ವೇದಿಕೆಯಾಗಿದೆ. ಹಾಗೆ ನೋಡಿದರೆ ಇಂತಹದೊಂದು ಪರಂಪರೆ ಶುರುವಾಗಿದ್ದು ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಆದರೆ ಸಾಮಾಜಿಕ ಕ್ರಾಂತಿಯ ರೂವಾರಿ ಅನ್ನಿಸಿಕೊಂಡಿದ್ದ ಅರಸರಿಗೆ ತಳಜಾತಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ಅವು ಸಂಘಟಿತವಾಗಬೇಕು ಎಂಬ ಉದ್ದೇಶ ಇತ್ತು.
ಹೀಗೆ ತಳ ಜಾತಿಗಳ ಜನ ಸಂಘಟಿತರಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನಿರಿಸಬೇಕು, ವ್ಯವಸ್ಥೆಯಲ್ಲಿ ತಮ್ಮ ಪಾಲು ಪಡೆಯಬೇಕು ಎಂಬ ಉದ್ದೇಶವಿತ್ತು. ಇದೇ ಕಾರಣಕ್ಕಾಗಿ ಅವರು ಶೋಷಿತ ಜಾತಿಗಳ ಪ್ರಮುಖರಿಗೆ: ನಿಮ್ಮ ಬೇಡಿಕೆಗಳಿಗೆ ಪೂರಕವಾಗಿ ಸಂಘಟಿತರಾಗಿ, ಸಮಾವೇಶಗಳನ್ನು ನಡೆಸಿ ಎಂದು ಹೇಳುತ್ತಿದ್ದರು. ಇದರ ಪರಿಣಾಮವಾಗಿ ಹಲ ಜಾತಿಗಳವರು ಸಣ್ಣ ಮಟ್ಟದಲ್ಲಾದರೂ ಒಗ್ಗೂಡಿ ಶಿವಮೊಗ್ಗದಲ್ಲಿ ತಮ್ಮ ಬಲ ಪ್ರದರ್ಶಿಸಿದರು.
ಇವತ್ತಿನ ಬಲ ಪ್ರದರ್ಶನಗಳಿಗೆ ಹೋಲಿಸಿದರೆ ಅವತ್ತು ಶಿವಮೊಗ್ಗದಲ್ಲಿ ನಡೆದ ಬಲಪ್ರದರ್ಶನ ಏನೇನೂ ಅಲ್ಲ. ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಅಲ್ಲಿ ಸೇರಿದ್ದವರು ಸಣ್ಣ,ಸಣ್ಣ ಟೆಂಟುಗಳನ್ನು ಹಾಕಿಕೊಂಡು ಅಲ್ಲಿ ಉಳಿದುಕೊಂಡಿದ್ದರು.
ಹೀಗೆ ಸಣ್ಣ ಮಟ್ಟದಲ್ಲಿ ಅವರು ಬಲ ಪ್ರದರ್ಶಿಸಿದರೂ ಸರ್ಕಾರದ ಮುಂದೆ ಯಾವ್ಯಾವ ಬೇಡಿಕೆ ಮಂಡಿಸಬೇಕು ಎಂಬ. ವಿಷಯದಲ್ಲಿ ಅವರಿಗೆ ಸ್ಪಷ್ಟತೆ ಇರಲಿಲ್ಲ. ಹೀಗಾಗಿಯೇ ತಮ್ಮ ಒಗ್ಗೂಡುವಿಕೆಯ ಪ್ರತೀಕವಾಗಿ ಅವರು ದೇವರಾಜ ಅರಸರ ಮುಂದೆ ಬೇಡಿಕೆ ಮಂಡಿಸಿದರಾದರೂ ಅದನ್ನು ನೋಡಿ ಅರಸರಿಗೇ ಖೇದವಾಯಿತು. ಯಾಕೆಂದರೆ ಜಾತಿಗಳ ಹೆಸರಿನಲ್ಲಿ ಒಂದಾದರೂ, ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಮಂಡಿಸುವಾಗ: ಏನೋ ನಿಮಗ್ ತಿಳ್ದಂಗೆ ನಮಗ್ ಒಳ್ಳೇದ್ ಮಾಡಿ ಎಂದಿದ್ದರು.
ಆದರೆ ಇದಾದ ನಂತರ ಜಾತಿ, ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಾಗುತ್ತಾ ಬಂತು. ಅದರೊಂದಿಗೆ ಸರ್ಕಾರಗಳ ಮುಂದಿದ್ದ ಸವಾಲುಗಳೂ ಹೆಚ್ಚಾದವು. ಹಾಗೆ ನೋಡಿದರೆ ದೇವರಾಜ ಅರಸರ ಕಾಲಘಟ್ಟದಲ್ಲಿ ಪರಿಣಾಮಕಾರಿಯಾಗಿ ಸಂಘಟಿತರಾದವರು ದಲಿತರು. ಆದರೆ ಅವರ ಹೋರಾಟಗಳಿಗೆ ಧರ್ಮಗುರುಗಳ ಎಂಟ್ರಿ ಆಗಲಿಲ್ಲ. ಮುಂದೆ ಇದಕ್ಕೆ ಬಲಿಷ್ಟ ರೂಪ ಸಿಕ್ಕಿದ್ದು ವೀರಪ್ಪ ಮೋಯ್ಲಿ ಅವರ ಕಾಲದಲ್ಲಿ.
ಆ ಕಾಲದಲ್ಲಿ ಚಿನ್ನಪ್ಪ ರೆಡ್ಡಿ ವರದಿಯನ್ನು ವಿರೋಧಿಸಿ ಒಕ್ಕಲಿಗರು ಬೃಹತ್ ಪ್ರತಿಭಟನೆಗಿಳಿದರು. ಇದರ ನೇತೃತ್ವ ವಹಿಸಿದ್ದವರು ಆದಿಚುಂಚನಗಿರಿ ಮಠಾಧೀಶರಾದ ಬಾಲ ಗಂಗಾಧರನಾಥ ಶ್ರೀಗಳು ಮತ್ತು ಆ ಹೋರಾಟದ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡರು, ಚಿತ್ರನಟ ಅಂಬರೀಷ್ ಇದ್ದರು.
ಹೀಗೆ ತಮ್ಮ ಬೇಡಿಕೆಗಳಿಗಾಗಿ ತಳಜಾತಿಗಳು ಒಗ್ಗೂಡಿ ಬಲ ಪ್ರದರ್ಶಿಸಲಿ ಎಂಬ ದೇವರಾಜ ಅರಸರ ಬಯಕೆ ಬೇರೆಯೇ ಸ್ವರೂಪ ಪಡೆದು ಧರ್ಮಗುರುಗಳೇ ಜಾತಿಯ ಮುಂಚೂಣಿಯಲ್ಲಿ ನಿಂತರು.
ಅವರು ಎಷ್ಟು ಶಕ್ತಿಶಾಲಿಗಳಾದರು ಎಂಬುದನ್ನು ಅರಿಯಬೇಕೆಂದರೆ ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲಘಟ್ಟವನ್ನು ನೋಡಬೇಕು.
ವೀರಪ್ಪ ಮೊಯ್ಲಿ ಅವರು ಶಿಕ್ಷಣದಲ್ಲಿ ಕ್ಯಾಪಿಟೇಶನ್ ಲಾಬಿಯನ್ನು ಬಗ್ಗು ಬಡಿಯಲು ಮುಂದಾದಾಗ ಅವರ ವಿರುದ್ಧ ದೊಡ್ಡ ಕೂಗು ಮೊಳಗಿಸುವ ಕೆಲಸ ಕೆಲ ಸಮುದಾಯಗಳಿಂದ ನಡೆಯಿತು.
ಇದೇ ರೀತಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗಲೂ ವ್ಯವಸ್ಥಿತ ಪ್ರತಿಭಟನೆ ನಡೆಯಿತು. ಅವತ್ತು ಕೃಷ್ಣ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದವರು ಎಚ್. ವಿಶ್ವನಾಥ್. ಅವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಒಂದು ನಿರ್ಣಯ ಕೈಗೊಂಡರು.
ಅದೆಂದರೆ: ಶಾಲೆಗಳನ್ನು ತೆರೆಯಲು ಅನುಮತಿ ಪಡೆದು ಸರ್ಕಾರದ ಅನುದಾನ ಪಡೆದ ಬಹುತೇಕರು ಹತ್ತು, ಹದಿನೈದು ಮಕ್ಕಳಿಗಾಗಿ ಶಾಲೆ, ಕೋರ್ಸು ಪ್ರಾರಂಭಿಸಿದ್ದಾರೆ ಮತ್ತು ಅನಗತ್ಯವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ರದ್ದುಪಡಿಸಿದರೆ ಸರ್ಕಾರಕ್ಕೆ ನೂರಿಪ್ಪತ್ತು ಕೋಟಿ ರೂಪಾಯಿ ಉಳಿತಾಯವಾಗುತ್ತದೆ ಎಂಬುದು.
ಯಾವಾಗ ಎಚ್. ವಿಶ್ವನಾಥ್ ಈ ಕುರಿತಂತೆ ಶಿಕ್ಷಣ ಇಲಾಖೆಯ ನಿಯಮಾವಳಿಗಳಿಗೆ ತಿದ್ದುಪಡಿ ತಂದರೋ? ಆಗ ಬಹುತೇಕರು ತಿರುಗಿ ಬಿದ್ದರು.
ಲಿಂಗಾಯತ ಮಠಾಧಿಪತಿಗಳಂತೂ ಸಚಿವ ಎಚ್.ವಿಶ್ವನಾಥ್ ಅವರ ತೀರ್ಮಾನವನ್ನು ಸಂಘಟಿತವಾಗಿ ಪ್ರತಿಭಟಿಸಿದರು.
ಅದೇ ಸಂದರ್ಭದಲ್ಲಿ ನಡೆದಿದ್ದ ಕಂಬಾಲಪಲ್ಲಿ ನರಮೇಧದ ಘಟನೆಯನ್ನು ವಿರೋಧಿಸಲು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಭೆಯೊಂದು ಏರ್ಪಾಡಾದಾಗ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕೂಡಾ ಆ ಸಭೆಯಲ್ಲಿ ಭಾಗವಹಿಸಿದ್ದರು. ಏಕ ಕಾಲಕ್ಕೆ ಕಂಬಾಲಪಲ್ಲಿ ಘಟನೆ ಮತ್ತು ವಿಶ್ವನಾಥ್ ನಡೆಯ ಬಗ್ಗೆ ಆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಒಬ್ಬ ಮಠಾಧಿಪತಿಗಳಂತೂ: ಸಣ್ಣ ಮಂತ್ರಿಯೊಬ್ಬರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಸಚಿವ ಸಂಪುಟದಿಂದಲೇ ಕಿತ್ತು ಹಾಕಿ ಎಂದು ಹೇಳುವಲ್ಲಿಯವರೆಗೆ ಹೋದರು. ಹಿಂದೆಂದೂ ಒಂದು ಜಾತಿಯ ಮಠಾಧಿಪತಿಗಳು ಅಷ್ಟು ಸಂಘಟಿತವಾಗಿ ಸೇರಿದ ಉದಾಹರಣೆ ಇರಲಿಲ್ಲ.
ಅವತ್ತು ಸಭೆಯ ಆಗ್ರಹಕ್ಕೆ ಮಣಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ: ಪರಸ್ಪರ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸೋಣ ಎಂದರು. ಹಾಗೆಯೇ ಈ ಸಂಬಂಧ ಮಾತುಕತೆ ನಡೆಸಿ ಅಂತ ಸಚಿವ ವಿಶ್ವನಾಥ್ ಅವರಿಗೂ ಸೂಚಿಸಿದರು.
ಮುಖ್ಯಮಂತ್ರಿಗಳ ಮಾತಿನಂತೆ ಸಚಿವ ವಿಶ್ವನಾಥ್ ವಿಧಾನಸೌಧದಲ್ಲಿ ಸಭೆ ಕರೆದರಾದರೂ ಅಲ್ಲಿಗೆ ಬರಲು ಯಾರೂ ಒಪ್ಪಲಿಲ್ಲ. ಬದಲಿಗೆ ನೀವೇ ಮಠಕ್ಕೆ ಬನ್ನಿ ಎಂದು ಒಬ್ಬ ಮಠಾಧಿಪತಿಗಳು ಕರೆದರು.
ಆದರೆ ಅದೂ ಒಪ್ಪಿತವಾಗದೆ,ಇದೂ ಒಪ್ಪಿತವಾಗದೆ ಕೊನೆಗೆ ಬೆಂಗಳೂರಿನ ಜೆ.ಎಸ್.ಎಸ್. ಜೂನಿಯರ್ ಕಾಲೇಜಿನಲ್ಲಿ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಎಲ್ಲರ ಪರವಾಗಿ ಮಾತನಾಡುವಂತೆ ಒಬ್ಬ ಮಠಾಧಿಪತಿಗಳಿಗೆ ಶಿಕ್ಷಣ ಸಂಸ್ಥೆಯ ಪ್ರಮುಖರು ಹೇಳಿದ್ದರಿಂದ ಅವರೇ ಧ್ವನಿ ಎತ್ತಿದರು.
ಅಷ್ಟೇ ಅಲ್ಲ,ಸರ್ಕಾರದ ಕ್ರಮವನ್ನು ಖಂಡಿಸಿ, ನಿಮಗೆ ಸರ್ಕಾರ ನಡೆಸಲು ಬರುವುದಿಲ್ಲ. ಹೋಗಿ ಹೆಂಡ ಮಾರುವವರ ಕೈಗೆ ಆಡಳಿತ ಕೊಡಿ ಎಂದುಬಿಟ್ಟರು. ಅವರು ಆ ಮಾತನಾಡಿದ್ದೇ ಓ, ಸಚಿವ ಎಚ್.ವಿಶ್ವನಾಥ್ ಕೂಡಾ ತಿರುಗಿ ಬಿದ್ದರು.
ಮಧ್ಯಪಾನವನ್ನು ವಿರೋಧಿಸುವ ನೀವು ಮದ್ಯದ ದೊರೆಗಳಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು. ಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ ಮುಖ್ಯಮಂತ್ರಿ ಕೃಷ್ಣ ಅವರು ವಿಶ್ವನಾಥ್ ಅವರನ್ನು ಶಿಕ್ಷಣ ಖಾತೆಯಿಂದ ಎತ್ತಂಗಡಿ ಮಾಡಿದರು.
ಮುಂದೆ ಮಠಾಧಿಪತಿಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದ್ದು 2004 ರಲ್ಲಿ. ಅವತ್ತು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಕೈಗೂಡಿಸಿ ಸರ್ಕಾರ ರಚಿಸಿದವು. ಅದೇ ಕಾಲದಲ್ಲಿ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. ಆದರೆ ಪ್ರತಿಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ಅನಂತಕುಮಾರ್ ಹಾಗೂ ಯಡಿಯೂರಪ್ಪ ಮಧ್ಯೆ ಕದನ ಶುರುವಾಯಿತು.
ಈ ಹಂತದಲ್ಲಿ ಯಡಿಯೂರಪ್ಪ ಅವರ ಪರವಾಗಿ ಸಮಾವೇಶವೊಂದರಲ್ಲಿ ಮಠಾಧಿಪತಿಗಳು ಭಾಗಿಯಾದರು. ಯಡಿಯೂರಪ್ಪ ಪರ ಧ್ವನಿ ಎತ್ತಿದರು. ಆ ಧ್ವನಿಗೆ ಬಿಜೆಪಿ ಹೈಕಮಾಂಡ್ ಮಣಿಯಿತು.
ಅಲ್ಲಿಂದ ಮುಂದೆ ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಾತಿ, ಸಮುದಾಯಗಳ ಮಠಾಧಿಪತಿಗಳು ಪ್ರಬಲರಾಗುತ್ತಾ, ತಮ್ಮ ಬೇಡಿಕೆಗಳಿದ್ದಾಗ ಬೀದಿಗಿಳಿಯುತ್ತಾ ಬಂದರು.
ಇವತ್ತು ನೂರಾರು ಮಠಾಧೀಶರು ತಮ್ಮ ಜಾತಿ, ಸಮುದಾಯಗಳ ಪರವಾಗಿ ಧ್ವನಿ ಎತ್ತಿ ಬೀದಿಗೆ ಬಂದಿದ್ದಾರೆ. ಈ ಹೋರಾಟವನ್ನು ಎನ್’ಕ್ಯಾಶ್ ಮಾಡಿಕೊಳ್ಳಲು ವಿವಿಧ ಪಕ್ಷಗಳ ರಾಜಕೀಯ ನಾಯಕರೂ ಪ್ರಯತ್ನಿಸುತ್ತಿದ್ದಾರೆ. ಪರಿಣಾಮ ಕರ್ನಾಟಕದ ಸಾಮಾಜಿಕ ಸಂರಚನೆಯೇ ಓಜೋನ್ ಪದರದಂತಾಗಿ ಹೋಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post