ಬೆಂಗಳೂರು: ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ, ರಾಜಕಾರಣಿ ಅಂಬರೀಶ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿದ್ದು, ವರನಟ ರಾಜಕುಮಾರ್ ಅವರ ಸ್ಮಾರಕದ ಪಕ್ಕದಿಂದಲೇ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಶನಿವಾರ ನಿಧನರಾದ ಅಂಬರೀಶ್ ಅವರ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸ್ಮಾರಕದ ಬಳಿಯೇ ಇಂದು ಸಂಜೆ ನೆರವೇರಿದ್ದು, ಅಂಬಿ ಪುತ್ರ ಅಭೀಶೇಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಸಂಸ್ಕಾರಕ್ಕೂ ಮೊದಲು ಗಣ್ಯಾತಿಗಣ್ಯರು ಅಂಬರೀಶ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಸಕಲ ಸರ್ಕಾರ ಗೌರವಗಳನ್ನು ಸಲ್ಲಿಸಿ, ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ವಿಧಿವಿಧಾನಗಳು ಆದ ನಂತರ ಚಿತ್ರ ರಂಗದ ಗಣ್ಯರು ಅಂಬಿ ಪಾರ್ಥಿವ ಶರೀರವನ್ನು ಚಿತೆ ಮೇಲಿರಿಸಿದರು. ಈ ವೇಳೆ ನಟರಾದ ಶಿವರಾಜ್ ಕುಮಾರ್, ಯಶ್, ಪ್ರೇಮ್, ಗಣೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್ ಅಂಬಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಅಗ್ನಿ ಸ್ಪರ್ಶ ಕ್ಕೂ ಮುನ್ನ ಪತಿ ಅಂಬಿ ಪಾರ್ಥಿವ ಶರೀರಕ್ಕೆ ಕೊನೆಯ ಬಾರಿ ಮುತ್ತಿಟ್ಟ ಸುಮಲತಾ, ಗಂಧದ ಕಟ್ಟಿಗೆ ಇಟ್ಟರು. ಮಗ ಅಭಿಶೇಕ್ ತಂದೆಯನ್ನು ಹಿಡಿದು ಗಳಗಳನೆ ಅತ್ತರು. ಈ ಕ್ಷಣ ಇಡಿಯ ರಾಜ್ಯ ಕಣ್ಣೀರು ಸುರಿಸಿದೆ.
ಸಂಸ್ಕಾರಕ್ಕೆ ಮೂರುವರೆ ಅಡಿ ಎತ್ತರದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿತ್ತು. ಅಂತ್ಯಕ್ರಿಯೆಗೆ ನೀಲಗಿರಿ, ಉಣಸೆ, ಹತ್ತಿ, ಸಾರ್ವೆ, ಗಂಧದ ಕಡ್ಡಿಗಳನ್ನು, ಇದರ ಜತೆಗೆ ಜಿಲ್ಲಾಧಿಕಾರಿ 13 ಕೆಜಿ ಗಂಧದ ಚಕ್ಕೆ ತರಲಿದ್ದು, ಒಟ್ಟಾರೆ 2.5 ಟನ್ ಕಟ್ಟಿಗೆ, 10 ಕೆಜಿ ಕೊಬ್ಬರಿ, 5 ಕೆಜಿ ಕರ್ಪೂರ, 50 ಕೆಜಿ ತುಪ್ಪದ ಜತೆಗೆ ಒಂದು ಚೀಲ ಹಸುವಿನ ಭರಣಿಯನ್ನು ಬಳಸಲಾಯಿತು.
ವಿಷ್ಣುವರ್ಧನ್ ಹಾಗೂ ಅನಂತಕುಮಾರ್ ಅವರ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದ ಖ್ಯಾತ ವೈದಿಕ ಭಾನುಪ್ರಕಾಶ್ ಶಿಷ್ಯರ ತಂಡದಿಂದ ಅಂತಿಮ ವಿಧಿವಿಧಾನ ನೆರವೇರಿಸಿದರು. ಭಾನುಪ್ರಕಾಶ್ ಅಮೆರಿಕಾದಲ್ಲಿರುವುದರಿಂದ ಶಿಷ್ಯರಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪಿಎಂ ದೇವೇಗೌಡ, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಬಹುತೇಕ ರಾಜ್ಯ ಸಚಿವರು, ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಯಶ್, ಜಗ್ಗೇಶ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅನಿರುದ್, ಎಸ್. ನಾರಾಯಣ್, ನಿರ್ದೇಶಕ ಶಶಾಂಕ್, ನಟಿ ರಾಗಿಣಿ, ನಟ ಉಪೇಂದ್ರ, ಸಚಿವ ಎಚ್.ಡಿ. ರೇವಣ್ಣ, ನಟ ಜೋಗಿ ಪ್ರೇಮ್, ರವಿಚಂದ್ರನ್, ಸಾಧುಕೋಕಿಲ, ಸಂಸದ ಡಿ.ಕೆ. ಸುರೇಶ್, ಹಿರಿಯ ನಟಿ ಸರೋಜಾದೇವಿ, ಹಿರಿಯ ನಟಿ ಬಿ.ವಿ.ರಾಧಾ, ನಟ ಪ್ರಕಾಶ್ ರೈ, ಹಿರಿಯ ನಟ ಶ್ರೀನಾಥ್, ಮಾಜಿ ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಟ ಗಣೇಶ್, ಮಾಜಿ ಸಚಿವ ಆರ್.ಅಶೋಕ್, ಎಂಎಲ್ಸಿ ತೇಜಸ್ವಿನಿ, ನಟಿ ಅಭಿನಯ, ತೆಲುಗು ನಟ ಮೋಹನ್ ಬಾಬು, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮೈತ್ರಿಗೌಡ, ಸ್ವಾಮಿ ನಿರ್ಮಲಾನಂದನಾಥ ಶ್ರೀ, ನಂಜವಧೂತ ಸ್ವಾಮೀಜಿ, ನಟ ರಮೇಶ್ ಅರವಿಂದ್, ಸಿಎಂ ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ನಟ ಅಭಿಜಿತ್, ದೇವರಾಜ್, ಪ್ರಜ್ವಲ್ ದೇವರಾಜ್, ಚರಣ್ರಾಜ್, ವಿಜಯ್ ರಾಘವೇಂದ್ರ, ರಾಮ್ಕುಮಾರ್, ರಾಜೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ನಾಯಕ ಟಿ.ಎ.ಶರವಣ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ನಟ ಶ್ರೀನಗರ ಕಿಟ್ಟಿ ಹಾಗೂ ಸಂಚಾರಿ ವಿಜಯ್ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಬಿಟ್ಟು ಅಂತಿಮ ನಮನ ಸಲ್ಲಿಸಿದರು.
Discussion about this post