ಕಲ್ಪ ಮೀಡಿಯಾ ಹೌಸ್ | ಸೊರಬ |
ನಿವೃತ್ತಿ ನಂತರ ಬದುಕು ಹಂತ-ಹಂತವಾಗಿ ಸಾಗಿದಂತೆ ವ್ಯಕ್ತಿ ಸಮಾಜದಿಂದ ದೂರವಾಗುವ ಜೊತೆಗೆ, ಇಳಿವಯಸ್ಸಿನಲ್ಲಿ ಕುಟುಂಬದಿಂದಲೂ ದೂರವಾಗುವ ಸ್ಥಿತಿ ಎದುರಾಗುತ್ತದೆ. ನಿವೃತ್ತ ಬದುಕು ಅರ್ಥಪೂರ್ಣವಾಗದಿದ್ದರೆ ಏಕಾಂಗಿತನ ಅನಿವಾರ್ಯವಾಗುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್. ಗಂಗಾಧರಪ್ಪ ಹೇಳಿದರು.
ತಾಲೂಕಿನ ಆನವಟ್ಟಿ ಹೋಬಳಿ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ವಾರ್ಷಿಕ ಮಹಾಸಭೆ, ಸಮ್ಮೇಳನ ಹಾಗೂ ಪಿಂಚಣಿದಾರರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿದ್ದಾಗ ಅಧಿಕಾರ, ಕುರ್ಚಿ, ವಾಹನ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹೊಂದಿಕೊಂಡಿರುತ್ತೇವೆ. ನಿವೃತ್ತಿಯ ನಂತರ ಅವುಗಳಿಂದ ದೂರಾಗಿ ಖಾಲಿ ಸಮಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ನಿವೃತ್ತಿಯ ಬಳಿಕ ಕೃಷಿ, ಸಾಹಿತ್ಯ ಓದು, ಕಥೆ-ಕಾದಂಬರಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೊತೆಗೆ ಸಂಘಟನೆಗಳ ಚಟುವಟಿಕೆಯಲ್ಲಿ ತೊಡಗಿ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಬೇಕು ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಕಲ್ಲಪ್ಪ ಚತ್ರಟ್ಟಿಹಳ್ಳಿ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ಹಾಗೂ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ಒದಗಿಸಬೇಕು. ಜೊತೆಗೆ ಆರೋಗ್ಯ ಸೇರಿದಂತೆ ನಿವೃತ್ತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ನಿವೃತ್ತ ನೌಕರರು ನಿಧನರಾದರೆ ಅವರ ಕುಟುಂಬಕ್ಕೆ ನೀಡಲಾಗುತ್ತಿರುವ ರೂ. 2,000 ನೆರವನ್ನು ಹಂತ-ಹಂತವಾಗಿ ರೂ. 5,000ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ದೇಹದಾನ ಹಾಗೂ ಕಣ್ಣುದಾನ ಮಾಡಿದ ನಿವೃತ್ತ ನೌಕರರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ರುದ್ರಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸದಾನಂದಗೌಡ ಬಿಳಗಲಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚೌಟಿ ಚಂದ್ರಶೇಖರ್ ಪಾಟೀಲ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















