ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಹಾಗೂ ಹರೀಶ್ ವೈದ್ಯನಾಥನ್ ಅವರನ್ನು ಒಳಗೊಂಡ ನ್ಯಾಯಪೀಠವು, ಭಾರತೀಯ ರೈಲ್ವೆ ಟ್ರಾಫಿಕ್ ಸರ್ವಿಸ್ ನ ಉನ್ನತ ಹುದ್ದೆಯಲ್ಲಿದ್ದ ಮಹಿಳೆಗೆ ಕೌಟುಂಬಿಕ ನ್ಯಾಯಾಲಯವು ಶಾಶ್ವತ ಜೀವನಾಂಶ ನಿರಾಕರಿಸಿ 2023ರಲ್ಲಿ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.
“ಜೀವನಾಂಶ ನೀಡುವುದು ಸಾಮಾಜಿಕ ನ್ಯಾಯದ ತತ್ವಗಳ ಆಶಯಗಳಿಗೆ ಅನುಸಾರವಾಗಿ. ದಾಂಪತ್ಯದಲ್ಲಿ ಬಿರುಕು ಮೂಡಿ ನಂಬಿದವರ ಆಸರೆಯಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಬೀಳಬಾರದು ಎಂಬುದು ಇದರ ಉದ್ದೇಶ. ಇದನ್ನು ಸ್ವಾವಲಂಬಿ ಜೀವನಕ್ಕೆ ಬೇಕಾಗುವ ಆದಾಯವಿರುವ ವ್ಯಕ್ತಿ ತನ್ನ ಪತಿ ಅಥವಾ ಪತ್ನಿಗೆ ಸಮಾನವಾದ ಆರ್ಥಿಕ ಸ್ಥಿತಿಯನ್ನು ತನ್ನದಾಗಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳಬಾರದು” ಎಂದಿದೆ.

ವಕೀಲರೊಬ್ಬರು ಭಾರತೀಯ ರೈಲ್ವೆ ಟ್ರಾಫಿಕ್ ಸರ್ವಿಸ್ ನ ಉನ್ನತ ಹುದ್ದೆಯಲ್ಲಿದ್ದ ಮಹಿಳೆಯನ್ನು 2010ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಗಂಭೀರ ಭಿನ್ನಾಭಿಪ್ರಾಯಗಳ ಕಾರಣದಿಂದ ಇಬ್ಬರು 14 ತಿಂಗಳ ನಂತರ ದೂರವಾಗಿದ್ದರು. ನಂತರ ಪತಿಯು ಕ್ರೌರ್ಯದ ಆಧಾರದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ, ಪತ್ನಿ ತನ್ನನ್ನು ಹಾಗು ತನ್ನ ಕುಟುಂಬದವರನ್ನು ಕೊಳಕು ಪದಗಳಿಂದ ನಿಂದಿಸುತ್ತಾರೆ ಎಂದು ಪತಿ ದೂರಿದ್ದರು. ಪತ್ನಿಯು ದಾಂಪತ್ಯದ ಹಕ್ಕುಗಳನ್ನು ಪತಿಗೆ ನಿರಾಕರಿಸುತ್ತಿದ್ದಾರೆ ಎಂದು ಕೂಡ ಆರೋಪ ಮಾಡಲಾಗಿತ್ತು.
ಪತ್ನಿಯು ಈ ಆರೋಪಗಳನ್ನು ನಿರಾಕರಿಸುತ್ತ, ಪತಿಯು ತನ್ನ ಜೊತೆ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಪತಿಯು ತನ್ನನ್ನು ಮದುವೆಯಾಗಿದ್ದು ತನ್ನ ಪ್ರಭಾವ ಬಳಸಿಕೊಂಡು ರೈಲ್ವೆ ಟ್ರಾಫಿಕ್ ಸರ್ವಿಸ್ ನ ಪ್ಯಾನೆಲ್ ವಕೀಲನಾಗುವ ಉದ್ದೇಶದಿಂದ ಎಂದು ಕೂಡ ಆರೋಪಿಸಿದ್ದರು.
ಇನ್ನು ಪತ್ನಿಯು ವಿಚ್ಛೇದನ ನೀಡಲು 50 ಲಕ್ಷ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದು ಆಕೆಯ ಪಾಟಿ ಸವಾಲು ಹಾಗು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರಗಳ ಒಕ್ಕಣೆಯಿಂದ ಸಾಬೀತಾಗಿದ್ದರಿಂದ, ಕೌಟುಂಬಿಕ ನ್ಯಾಯಾಲಯವು, ಈ ಪ್ರಕರಣದಲ್ಲಿ ವಿಚ್ಛೇದನಕ್ಕೆ ವಿರೋಧ ದಾಂಪತ್ಯದ ಮರುಸ್ಥಾಪನೆಯ ಸದುದ್ದೇಶದಿಂದ ಅಲ್ಲ ಬದಲಾಗಿ ಹಣಕಾಸಿನ ಲೆಕ್ಕಾಚಾರದ ಮೇಲೆ ಮಾಡಲಾಗಿದೆ ಎಂದೂ ಅಭಿಪ್ರಾಯಪಟ್ತಿತ್ತು. ಕೌಟುಂಬಿಕ ನ್ಯಾಯಾಲದ ತೀರ್ಪನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಭಾವನಾತ್ಮಕ ಅಂಶಗಳ ಮೇಲೆ ಇಲ್ಲಿ ವಿಚ್ಛೇದನದ ಅರ್ಜಿಯನ್ನು ವಿರೋಧಿಸಿಲ್ಲ. ವಿರೋಧದ ಹಿಂದೆ ಆರ್ಥಿಕ ಲಾಭ ನಷ್ಟಗಳ ಲೆಕ್ಕಾಚಾರಗಳು ಇರುವುದು ಸ್ಪಷ್ಠವಾಗಿದೆ ಎಂದು ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post