ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-30 |ಆದಿಕಾವ್ಯವಾದ ರಾಮಾಯಣದಲ್ಲಿ ಶ್ರೀರಾಮನು ಬೆಳೆದ, ವಿದ್ಯಾಭ್ಯಾಸ ಮಾಡಿದ, ರಾಜ್ಯವಾಳಿದ ಕೋಸಲದೇಶದ ರಾಜಧಾನಿ ಅಯೋಧ್ಯೆ. ಇದರ ಇತಿಹಾಸ, ನಗರವ್ಯವಸ್ಥೆ, ಇಲ್ಲಿಯ ಜನರ ಜೀವನಪದ್ಧತಿ, ಮನಃಸ್ಥಿತಿ ಇವೆಲ್ಲವನ್ನೂ ಲವ-ಕುಶರು ವಾಲ್ಮೀಕೀಯರಾಮಾಯಣ ಬಾಲಕಾಂಡದ ೫, ೬ ಹಾಗೂ ೭ನೇ ಸರ್ಗಗಳಲ್ಲಿ ವರ್ಣಿಸಿರುವರು.
ಇತಿಹಾಸ
ಈ ಅಯೋಧ್ಯೆ ಕೋಸಲದೇಶದ ನಗರಿ. ಪ್ರಜಾಪತಿಯೇ ರಾಜ್ಯವಾಳಿದ ಈ ಕೋಸಲ, ಮುಂದೆ ಇಕ್ಷ್ವಾಕುವಂಶದ ರಾಜರಿಗೆ ಸೇರಿತು. ತನ್ನ ೬೦ ಸಾವಿರ ಮಕ್ಕಳಿಂದ ಸಮುದ್ರ ತೋಡಿಸಿದ ಸಗರ, ಗಂಗೆ ಇಳಿಸಿದ ಭಗೀರಥ ಇಲ್ಲಿನ ಪ್ರಮುಖ ರಾಜರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ರಾಮಾಯಣದ ಬಹುಭಾಗ ನಡೆದಿದ್ದು ಇಲ್ಲೇ-
‘ಇಕ್ಷ್ವಾಕೂಣಾಮಿದಂ ತೇಷಾಂ ರಾಜ್ಞಾಂ ವಂಶೇ ಮಹಾತ್ಮನಾಮ್ |
ಮಹದುತ್ಪನ್ನಮಾಖ್ಯಾನಂ ರಾಮಾಯಣಮಿತಿ ಶ್ರುತಮ್ ||ಬಾಲ.೫.೩||’
ಈ ನಗರಿ ಸ್ವತಃ ವೈವಸ್ವತ ಮನುವೇ ನಿರ್ಮಿಸಿದ್ದು. ಇಲ್ಲಿ ಮುಂದೆ ಬಂದ ರಾಜರೆಲ್ಲರೂ ಮನುವಿನಂತೆಯೇ ಸಮೃದ್ಧವಾಗಿ ರಾಜ್ಯವಾಳಿದರು.
ಭೌಗೋಲಿಕ ದೃಷ್ಟಿ
ರಾಮಾಯಣಕಾಲದಲ್ಲೂ, ಈಗಲೂ, ಅಯೋಧ್ಯಾನಗರಿಯು ಸರಯೂನದಿಯ ತೀರದಲ್ಲಿದೆ. ಪ್ರಕೃತ ಈ ನಗರಿ ರಾಮಾಯಣಕಾಲದಲ್ಲಿದ್ದ ರೀತಿ ವಿಶಾಲವಾಗಿಲ್ಲ. ವಾಲ್ಮೀಕಿಗಳು ಅಯೋಧ್ಯೆಯು ೧೨ ಯೋಜನ ಉದ್ದ, ೩ ಯೋಜನ ಅಗಲ ಇದೆ ಎಂದು ವರ್ಣಿಸಿದ್ದರೂ, ನಮಗೆ ಯೋಜನಪರಿಮಾಣ ಅಸ್ಪಷ್ಟವಾಗಿಯೇ ಕಾಣುತ್ತದೆ.
ಪ್ರಮುಖ ಸ್ಥಳಗಳು
ಲವಕುಶರು ಅಯೋಧ್ಯೆಯಲ್ಲಿ ಮೊದಲು ವರ್ಣಿಸಿದ್ದೇ ಅರಮನೆಗೆ ದಾರಿಯಾದ ರಾಜಮಾರ್ಗ. ಈ ರಾಜಮಾರ್ಗ ರಥಗಳ ಸಂಚಾರಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಅದರ ಮಧ್ಯಕ್ಕೆ ಸಾಲವೃಕ್ಷಗಳು (ಇಂದಿನ ‘ಡಿವೈಡರ್’ ನಂತೆ) ಇದ್ದವು. ಅಲ್ಲಲ್ಲಿ ಅರಳಿದ ಹೂವುಗಳು ಎರಚಲ್ಪಟ್ಟಿದ್ದವು.
ಅಯೋಧ್ಯೆಯಲ್ಲಿ ನಾಟಕ, ನೃತ್ಯಗಳಿಗೆ ಪ್ರತ್ಯೇಕವಾದ ಮಂಚಗಳು ಅಲ್ಲಲ್ಲಿ ಇದ್ದವು. ನಗರಿಯ ಮಹಾದ್ವಾರ ಹಾಗೂ ಉಪದ್ವಾರಗಳಿಗೆ ತೋರಣಗಳು ಕಟ್ಟಲಾಗಿತ್ತು. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಮಾವಿನ ತೋಪುಗಳು, ಉದ್ಯಾನಗಳು ಇದ್ದವು. ಅಲ್ಲಿನ ಎಲ್ಲ ಮನೆಗಳೂ ರತ್ನಖಚಿತವಾದ ಗೋಪುರ-ಧ್ವಜಗಳುಳ್ಳ ಮಹಡಿಮನೆಗಳು. ಅಲ್ಲಲ್ಲಿ ಜೂಜು ಅಡ್ಡೆಗಳೂ ಇದ್ದವು.
ಜನಸಂಕುಲ
ಅಯೋಧ್ಯೆಯ ಪ್ರಜೆಗಳೆಲ್ಲರೂ ಆಸ್ತಿಕರು. ಅವರನ್ನು ಕುಂಡಲಿಗಳು ಮುಕುಟಿಗಳು ಎಂದು ವರ್ಣಿಸಿದ್ದಾರೆ. ಈ ಅಯೋಧ್ಯೆಗೆ ಬೇರೆ ದೇಶಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಆದ್ದರಿಂದ ಸಾಮಾನ್ಯರ ಧನಸಂಪತ್ತೂ ಎಷ್ಟು ಮಹತ್ತರವಾಗಿತ್ತು ಎಂದು ಊಹಿಸಬಹುದು. ಅವರು ಕೇವಲ ಲೋಭರಹಿತ ಧನಿಕರಷ್ಟೇ ಅಲ್ಲದೇ ದಾನಿಗಳು, ಅತಿಥಿಪೂಜಕರೂ ಆಗಿದ್ದರು. ಹಾಗೆಯೇ ದೀರ್ಘಾಯುಗಳು, ಗೋ-ಅಶ್ವಗಳ ಸಂಪತ್ತುಳ್ಳವರು ಆಗಿದ್ದರು.
ಅಯೋಧ್ಯೆಯ ಬ್ರಾಹ್ಮಣರೆಲ್ಲರೂ ಮಹರ್ಷಿಗಳಂತೆ ತೇಜಸ್ವಿಗಳಾಗಿದ್ದರು. ವೇದ-ವೇದಾಂಗ ಜ್ಞಾನಿಗಳೂ, ಅಗ್ನಿಹೋತ್ರಿಗಳೂ ಆಗಿದ್ದರು-
‘ತಾಮಗ್ನಿಮದ್ಭಿರ್ಗುಣವದ್ಭಿರಾವೃತಾಂ
ದ್ವಿಜೋತ್ತಮೈರ್ವೇದಷಡಂಗಪಾರಗೈಃ |
ಸಹಸ್ರದೈಃ ಸತ್ಯರತೈರ್ಮಹಾತ್ಮಭಿ-
ರ್ಮಹರ್ಷಿಕಲ್ಪೈ ಋಷಿಭಿಶ್ಚ ಕೇವಲೈಃ ||ಬಾಲ.೫.೨೩||
ರಕ್ಷಣಾ ವ್ಯವಸ್ಥೆ
ಅಯೋಧ್ಯೆಯ ಸುತ್ತಲೂ ದಾಟಲಾಗದ ದೊಡ್ಡ ಕೋಟೆ ಇತ್ತು. ಅದರ ಮುಂದೆ ದೊಡ್ಡ ಆಳವಾದ ಜಲದುರ್ಗ ಇತ್ತು. ಆ ಕೋಟೆಯೊಳಗೆ ೧೦೦ ಶತಘ್ನೀ(ಒಮ್ಮೆಯೇ ೧೦೦ ಜನರನ್ನು ಕೊಲ್ಲುವ ವಿಶಿಷ್ಟ ಆಯುಧ)ಗಳು ಇದ್ದವು.
ಅಲ್ಲಿನ ಯೋಧರೆಲ್ಲರೂ ತಮ್ಮವರನ್ನು, ಶತ್ರುಪಕ್ಷದವರನ್ನು ಸರಿಯಾಗಿ ವಿವೇಚಿಸಿ ಶಸ್ತ್ರ ಹೂಡುತ್ತಿದ್ದರು. ಅವರಲ್ಲಿ ಶಬ್ದವೇಧ್ಯವು ಅತಿಸಾಮಾನ್ಯವಾಗಿತ್ತು.
ಈ ನಗರಿಯಲ್ಲಿ ಕಾಂಬೋಜ, ಬಾಹ್ಲೀಕ, ವನಾಯು, ಸಿಂಧು ಮೊದಲಾದ ದೇಶಗಳಿಂದ ಬಂದ ಅತಿವೇಗವಾದ ಯುದ್ಧಕ್ಕೆ ಉಪಯುಕ್ತವಾದ ಕುದುರೆಗಳು, ವಿಂಧ್ಯ (ಭದ್ರ), ಹಿಮಾಲಯ (ಮಂದ್ರ), ಸಹ್ಯ (ಮೃಗ) ಮೊದಲಾದ ಪರ್ವತಪ್ರದೇಶದಿಂದ ತರಲ್ಪಟ್ಟ ಬಲಿಷ್ಠರಾದ ನಿತ್ಯಮತ್ತರಾದ ಆನೆಗಳ ಎಲ್ಲ ಜಾತಿ-ಉಪಜಾತಿಗಳೂ ಇದ್ದವು-
’ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ |
ಭದ್ರಮಂದ್ರೈರ್ಭದ್ರಮೃಗೈರ್ಮೃಗಮಂದ್ರೈಶ್ಚ ಸಾ ಪುರೀ ||ಬಾಲ.೬.೨೫||’
ರಾಜಪ್ರಕೃತಿ
ರಾಜನ ಅಮಾತ್ಯರ ಗುಂಪಿಗೆ ರಾಜಪ್ರಕೃತಿ ಎಂದು ಹೆಸರು. ಸಾಮಾನ್ಯತಃ ಮನುಸ್ಮೃತಿಯ ಪ್ರಕಾರ ೭ ಅಥವಾ ೮ ಅಮಾತ್ಯರಿದ್ದರೆ ಸೂಕ್ತ. ಇಲ್ಲಿನ ಅಮಾತ್ಯರು ಯಾವಕಾರಣಕ್ಕೂ ಸುಳ್ಳು ಹೇಳಿದವರಲ್ಲ. ಎಲ್ಲರೂ ಧರ್ಮಜ್ಞರು, ರಾಜಭಕ್ತಿಯುಳ್ಳವರೂ ಆಗಿದ್ದರು. ಅಮಾತ್ಯರು ಇಡೀ ದೇಶದ ವರ್ತಮಾನವನ್ನು ಗೂಢಚರರ ಮೂಲಕ ತಿಳಿದವರಾಗಿದ್ದರು.
ದಶರಥನ ಕಾಲದಲ್ಲಿ ೮ ಅಮಾತ್ಯರಿದ್ದರು. ಧೃಷ್ಟಿ, ಜಯಂತ, ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಕೋಪ, ಧರ್ಮಪಾಲ ಮತ್ತು ಸುಮಂತ್ರ. ಹೀಗೆಯೇ ದಶರಥನಿಗೆ ಇಬ್ಬರು ಋತ್ವಿಜರು- ವಸಿಷ್ಠ ಹಾಗೂ ವಾಮದೇವ. ಇನ್ನೂ ಕೆಲವರು ಪುರೋಹಿತರು- ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ, ಕಾತ್ಯಾಯನ.
ಹೀಗೆ ತಮ್ಮ ತಮ್ಮ ಅಮಾತ್ಯರಿಂದ ಸಲಹೆಯನ್ನು ಪಡೆಯುತ್ತಿದ್ದ ಕೋಸಲದ ರಾಜರು ಈ ಅಯೋಧ್ಯೆಯೆಂಬ ರಾಜಧಾನಿಯಲ್ಲಿ ಸಮೃದ್ಧವಾಗಿ ರಾಜ್ಯವಾಳುತ್ತಿದ್ದರು.
||ಶ್ರೀಕೃಷ್ಣಾರ್ಪಣಮಸ್ತು||
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post