ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಗಂಗೊಳ್ಳಿ ಮೀನುಗಾರರ ಬಹುದೊಡ್ಡ ಬೇಡಿಕೆ ಗಂಗೊಳ್ಳಿ ಜೆಟ್ಟಿ ನಿರ್ಮಾಣಕ್ಕೆ 12 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಇದಕ್ಕೆ ಅನುಮೋದನೆ ನೀಡಿದ್ದು, ಶಾಸಕ ಸುಕುಮಾರ ಶೆಟ್ಟಿಯವರ ಪ್ರಯತ್ನಕ್ಕೆ ಸಂದ ಜಯ ಇದಾಗಿದೆ.
ಮೀನುಗಾರಿಕೆಯ ಕುಂದಾಪುರ ತಾಲೂಕಿನ ಬಹುದೊಡ್ಡ ಕೇಂದ್ರವೆನಿಸಿದ ಗಂಗೊಳ್ಳಿ ಬಂದರಿಗೆ ಕಳಪೆ ಕಾಮಗಾರಿಯಿಂದ ನಿರ್ಮಾಣಗೊಂಡಿದ್ದ ಜೆಟ್ಟಿ ಕುಸಿದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸಮಸ್ಯೆಯನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರು ಶಾಸಕರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಈಡೇರಿಸುವುದಾಗಿ ಅಲ್ಲಿಯ ಮೀನುಗಾರರಿಗೆ ಆಶ್ವಾಸನೆ ನೀಡಿದ್ದರು.
ನಂತರ ನಿರಂತರವಾಗಿ ಈ ಬಗ್ಗೆ ಹೋರಾಟ ಮಾಡಿದ ಶಾಸಕರು, ಕಳೆದ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ನಾಡಗೌಡರಿಗೂ ಕೂಡ ಮನವಿಯನ್ನು ಸಲ್ಲಿಸಿದ್ದರು.
ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ, ಜೆಟ್ಟಿಯ ರಿಪೇರಿ ಕಾಮಗಾರಿ ಬಿಟ್ಟು ಅದರ ಪುನರ್’ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದ ಶಾಸಕರು, ಸಂಸದರಾದ ಬಿ.ವೈ. ರಾಘವೇಂದ್ರ ಅವರ ಮೂಲಕ ಒಟ್ಟು 12 ಕೋಟಿ ರೂ. ಮೊತ್ತಕ್ಕೆ ಜೆಟ್ಟಿಯ ಪುನರ್’ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.
ಇಂದು ಸಂಪುಟ ಸಭೆಯಲ್ಲಿ ಒಟ್ಟು 12 ಕೋಟಿ ರೂಪಾಯಿ ಮೊತ್ತದ ಜೆಟ್ಟಿ ಪುನರ್’ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಗಂಗೊಳ್ಳಿ ಮೀನುಗಾರರ ಬಹುದಿನಗಳ ಕನಸಿಗೆ ಮುಕ್ತಿ ದೊರೆಕಿಸಿಕೊಟ್ಟಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮೀನುಗಾರರು, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರು ನುಡಿದಂತೆ ನಡೆದಿದ್ದಾರೆ. ಗಂಗೊಳ್ಳಿಯ ಜನತೆ ಹಾಗೂ ಸಮಸ್ತ ಮೀನುಗಾರರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post