ಕಲ್ಪ ಮೀಡಿಯಾ ಹೌಸ್
ಅಕ್ಕಾ,
ಅದೇ ಒಂದು ಜಗತ್ತು. ಎಷ್ಟು ಚಂದದ ಬಂಧ. ಬೆನ್ನಿಗೆ ಹುಟ್ಟಿರಬಹುದು, ಬೆನ್ನಿಗೆ ನಿಂತು ಇಡೀ ಜೀವನ ಕಾದಿದ್ದು ನೀನೇ ಅಕ್ಕ. ಪುಟ್ಟ ಕೂಸಿದ್ದಾಗ ಅಮ್ಮನ ಕಾಡಿದುದು ಉಂಟು, ಆಗಲೂ ನೀ ಬಂದು ಸಲಹಿದ ನೆನಪು. ಅಕ್ಕ ಎಂದರೆ ಅಕ್ಕರೆ, ಅಕ್ಕ ಎಂದರೆ ಸಕ್ಕರೆ, ಅಕ್ಕ ಎಂದರೆ ಪ್ರೀತಿಯ ಜೋಳಿಗೆ.
ಈ ಕ್ಷಣಕ್ಕೂ ಎದೆಯ ಮೂಲೆಯಲ್ಲಿ ಅಳುಕು ಹುಟ್ಟಿದರೆ ಬೆರಳು ಚಲಿಸುವುದು ಅಕ್ಕನ ಕಡೆಗೆ. ಅಲ್ಲೊಂದು ಅಳೆಯಲಾಗದ ಧೈರ್ಯ ಪರ್ವತ ಇದೆ. ನನ್ನ ಎತ್ತಿಕೊಳ್ಳಲು ಆಗದೆ ನೀ ಎತ್ತಿಕೊಂಡರೂ ಅಪ್ಪುಗೆಗೆ ಸೋತು ಉಸಿರಾಡಲು ಮರೆತದದು ಉಂಟು. ನಿನ್ನ ಹೆಜ್ಜೆಯ ಮೇಲೆ ನನ್ನ ಹೆಜ್ಜೆಗಳ ಇಟ್ಟು ನಡೆವುದ ಕಲಿತದು ಉಂಟು.
ಬಾಲ್ಯದಲ್ಲಿ ಬೆಳ್ಳಕ್ಕಿಗೆ ಕೈ ತೋರಿದಾಗ
ಬೆರಳುಗುರಲ್ಲಿ ಮೂಡುತ್ತಿದ್ದ ಬೆಳಗು ಅವಳು
ಬೆಳ ಬೆಳಗು ಕಿರಣಗಳ ಸೋಕಿದಾಗ
ನದಿಯ ನೀರಲ್ಲಿ ಏಳುತ್ತಿದ್ದ ಮಂಜಿನ ಹನಿ ಅವಳು
ಪುಟ್ಟ ಪುಟ್ಟ ಹೆಜ್ಜೆಯ ಊರಿದಾಗ
ಕಾಲುಗಳಂಚಲ್ಲಿ ನಿಲ್ಲುತ್ತಿದ್ದ ಧೈರ್ಯ ಅವಳು
ಬಣ್ಣದ ಬದುಕಿಗೆ ನಾ ಸೋತಾಗ
ಉಸಿಉಸಿರಂಚಲ್ಲಿ ಕಾಯುತ್ತಿದ್ದ ದೈವ ಅವಳು
ಹೊಸ ಹೊಸ ಕನಸುಗಳ ಕಂಡಾಗ
ಮನದ ಗೂಡಲ್ಲಿ ಭರವಸೆ ಅವಳು
ರಾಶಿ ರಾಶಿ ಕನಸುಗಳ ತುಂಬಿದಾಗ
ಕಣ್ಣುಗಳಂಚಲ್ಲಿ ಚಿಮ್ಮುತ್ತಿದ್ದ ಸೊಬಗು ಅವಳು
ಹೌದು ಅವಳು ನನ್ನಕ್ಕ
ಕಾಮನಬಿಲ್ಲಿಗೂ ಚಂದ
ಮಗುವ ಮನಕೂ ಮುಗ್ಧ
ಬಿಡಿಸಲಾರದ ಬಂಧ
ಅಕ್ಷಯ ರೂಪದ ಗಂಧ
ನಿನ್ನ ಊಟದ ಜೊತೆ ನನ್ನ ಎರಡು ತುತ್ತುಗಳ ಎತ್ತಿ ಕೊಟ್ಟಿದ್ದು ನೀನು. ಒಂದು ಹಣ್ಣನ್ನು, ಒಂದು ಸಿಹಿಯನ್ನು, ಒಂದು ಪೆನ್ಸಿಲ್ಲನ್ನೂ ಪಾಲು ಮಾಡಿ ಹಂಚಿಕೊಂಡ ದಿನಗಳು ಇನ್ನು ಹಸಿಯಾಗೆ ಇವೆ. ನನ್ನ ಹುಳುಕಿಗೆಲ್ಲ ನಿನಗೆ ಏಟು; ನಿನ್ನ ಅಂಗಿ ಹಾಕಿಕೊಂಡು ಮೆರೆದ ದಿನಗಳೆಷ್ಟೋ. ಅಬ್ಬಾ ಬಾಲ್ಯವನ್ನು ಹಂಚಿಕೊಂಡರೆ ಮೊಗೆದಷ್ಟೂ ಚಿಮ್ಮುವ ನೆನಪುಗಳ ಒರತೆ. ಹುಳುಕು ಎಂದಾಗ ನೆನಪಾಯಿತು, ನಿಜವಾಗಿಯೂ ಪಾಠದ ಪುಸ್ತಕಗಳ ಒಳಗೆ ಕಥೆ ಪುಸ್ತಕ ಇಟ್ಟು ಓದಿಕೊಳ್ಳೋದನ್ನು ನಾನೇ ಎಷ್ಟೋ ಬಾರಿ ಅಮ್ಮನಿಗೆ ಹೇಳಿಕೊಟ್ಟಿದ್ದು.
ಈಗ ನೋಡು ಪಾಠ ಅಂದ ಮೇಲೆ ಶಾಲೆ ನೆನಪು ಆಯ್ತು. ನಿನ್ನ ಬ್ಯಾಗ್ ನಂಗೆ ಕೊಟ್ಟು ಶಾಲೆಗೆ ಕಳಿಸ್ತಿದ್ರು. ಅದಕ್ಕೂ ಅಳೋದು ಇರೋದು. ಹೊಸದೇ ಬ್ಯಾಗ್ ಬೇಕು ಅಂತ. ಕಾಲೇಜ್ ಗೆ ಹೋಗೋ ಟೈಮಲ್ಲಿ ಕೊನೆಗೆ ನಿನ್ನ ಬ್ಯಾಗ್ ಬೇಕಾಯ್ತು. ಅದು ಬೇರೆ ವಿಷಯ ಆಮೇಲೆ ಹೇಳ್ತೀನಿ. ಇಡೀ ಶಾಲೇನೆ ಒಂದು ಯೂನಿಫಾರ್ಮ್ ಹಾಕಿದ್ರೆ, ನಮ್ಮಿಬ್ರ ಯೂನಿಫಾರ್ಮ್ ಬೇರೇನೇ ಇರೋದು. ಜೂನ್ ಅಂದ ಕೂಡಲೇ ಹೊಸ ಬ್ಯಾಗ್, ಹೊಸ ಚಪ್ಪಲ್, ಹೊಸ ರೈನ್ ಕೋಟ್, ಹೊಸ ಬುಕ್ಸ್, ಹೊಸ ನೋಟ್ಸ್, ಹೊಸ ಕ್ಲಾಸ್. ಎಲ್ಲಾ ಎರಡು ಜೊತೆ ಬೇಕು; ನಿಂಗೆ ನಂಗೆ. ಅಬ್ಬಾ., ಥ್ಯಾಂಕ್ಸ್ ಪಪ್ಪ. ನೀನಂತೂ ಸೂಪರ್. ನೀನಿದ್ಯಲ್ಲಾ ಸೋ ನಾ ಎಲ್ಲಾ ಹುಡ್ಗರ ಹಾಗೆ ನೀರಾಡೋ ಹಾಗಿರಲಿಲ್ಲ, ಓಡೋ ಹಾಗಿರಲಿಲ್ಲ, ಜಗಳ ಅಂತೂ ಕೇಳಲೇಬಾರದು.
ನೀ ಹಾಕಿಕೊಟ್ಟ ದಾರಿಲೇ ನಾ ಬಂದೆ ಅಂತ ಹೇಳಿಕೊಳ್ಳೊಕೆ ನಂಗೆ ಈಗಲೂ ಹೆಮ್ಮೆ ಇದೆ. ಇವತ್ತು ನಾನು ಏನು ಆಗಿದಿನೋ ಅದೆಲ್ಲಕ್ಕೂ ನೀನು ಒಂದು ದೊಡ್ಡ ಕಾರಣ. ಸಾಲುಗಳಲ್ಲಿ ತುಂಬಲು ಆಗದು ನಿನ್ನ ಪ್ರೀತಿಯ, ಮಮತೆಯ. ನಿನ್ನ ಪಡೆಯೋಕು ಪುಣ್ಯ ಮಾಡಿದ್ದೆ ಅನ್ಸತ್ತೆ ನಾನು. ಹೇಳೋಕೆ ತುಂಬಾ ಇದೆ. ಆದ್ರೆ ನೆನಪುಗಳನ್ನು ನೂರು ಸಾರಿ ಮೆಲುಕು ಹಾಕಿ ಖುಷಿ ಪಡುವ ಅವಕಾಶ ಇದ್ದಾಗ, ಅದನ್ನು ಮೂರು ಅಕ್ಷರದಲ್ಲಿ ಹಾಳೆಗೆ ಇಳಿಸಿ ಕ್ಷಣಿಕ ಮಾಡಿ ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲ.
ಬರಿ ಎಂದರೆ ಬರಿಯಲಿ ಹೇಗೆ
ನೀನೇ ನಾನಾಗಿರುವಾಗ
ಬರಿ ಎಂದರೆ ಬರಿಯಲಿ
ಹೇಗೆ ನೀ ಪದಗಳಿಗೆ ಸಿಗದಿದ್ದಾಗ
ನನಗಿಂತ ಮೊದಲು ಬಂದೆ
ನನ್ನ ಕನಸುಗಳಿಗೆ ನೀರನು ತಂದೆ
ದಿಕ್ಕಿಲ್ಲದಾಗ ಬೆನ್ನಿಗೆ ನಿಂತೆ||ಬರಿ ಎಂದರೆ||
ಬದುಕು ಅಂದಾಗ ಗುರುವಾಗಿ ನಿಂತೆ
ಕಷ್ಟ ಅಂದಾಗ ಗೆಳತಿ ಆಗಿ ಕುಳಿತೆ
ಖುಷಿ ಅಂದಾಗೆಲ್ಲ ನಗುತಾ ಬಂದೆ||ಬರಿ ಎಂದರೆ||
ಅಮ್ಮನಂತೆಯೇ ನೀನು ಗುಟುಕಿಡಲು
ಪಪ್ಪನಾಗುವೆ ನೀನು ಮುನಿಸು ತೋರಲು
ನನ್ನ ಆಸೆಗಳಿಗೆಲ್ಲಾ ನಿನ್ನದೇ ಕೊರಳು||ಬರಿ ಎಂದರೆ||
ಚಂದಕು ಅಂದಕು ನೀನೇ ಹೋಲಿಕೆ
ನೀ ದೂರಾಗುವ ನಾಳೆಗಳಾದರೂ ಏತಕೆ
ನೂರು ಜನುಮವಾದರೂ ಬೇಕು
ನಿನ್ನ ಋಣ ಸಂದಾಯಕೆ||ಬರಿ ಎಂದರೆ||
ಓದುವವರಿಗೆ ಅನ್ನಿಸಬಹುದೊ ಏನೋ, ಇವನಿಗೆ ಅಷ್ಟೇನಾ ಅಕ್ಕ ಇರೋದು ಅಂತ. ಅಕ್ಕ ಅಂದ್ರೆ ಅಮ್ಮ, ಅಕ್ಕ ಅಂದ್ರೆ ಗುರು, ಅಕ್ಕ ಅಂದ್ರೆ ಈ ಪ್ರಪಂಚ. ಅಕ್ಕ ಅಂದರೆ ಅದೇ ಕಿನ್ನರಿ ನಾವು ಹಾರುವುದನ್ನು ಮರೆತಾಗ ಬಂದು ರೆಕ್ಕೆ ಆಗುವವಳು. ಅಕ್ಕ ಇರುವವರ ಕೇಳಿ ನೋಡಿ, ಅವಳು ದಾರಿ ಅಷ್ಟೆ ಹಾಕಿ ಕೊಡಲ್ಲ, ಅವಳ ಕೆಲಸ ಬಿಟ್ಟು, ನಮಗೆ ಸಮಯ ಕೊಟ್ಟು, ಅಲ್ಲೆಲ್ಲೋ ಮರೆಯಲ್ಲಿ ನಿಂತು ನಿಮ್ಮ ಪ್ರಯಾಣನ ನೋಡ್ತಾ ಇರ್ತಾಳೆ. ನೋಡ್ತಾ ಇರ್ತಾಳೆ ಅನ್ನೋದು ನಿಮಗೂ ಗೊತ್ತಿರತ್ತೆ. ಆ ನಂಬಿಕೆಯ ಹೆಸರೇ ಅಕ್ಕ, ಅದೇ ಅಕ್ಕ ಅನ್ನೋ ಜಗತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post