ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗಿನ ಮಂದಿಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ನೀಡಿದೆ.
ಶ್ರೀಮಠದ ಸಂಘಟನೆಯ ಮೂಲಕ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ನೆರವು ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ನಲುಗಿದವರಿಗೆ ಸಹಾಯ ಹಸ್ತ ನೀಡಲಾಗಿದೆ.
ಮಳೆಪೀಡಿತ ಸಂಪಾಜೆ ಪ್ರದೇಶದಲ್ಲಿ ಅಗತ್ಯ ಅಕ್ಕಿ, ಬಟ್ಟೆ, ಆಹಾರ ತಯಾರಿಸಲು ಅಗತ್ಯವಾದ ಸಿಲೆಂಡರ್ ಒಲೆಗಳು ಹಾಗೂ ಓಡಾಟಕ್ಕೆ ಅಗತ್ಯವಾದ ಓಮಿನಿ ಮತ್ತು ಪಿಕಪ್ ವಾಹನಗಳನ್ನು ಒದಗಿಸಲಾಗಿದೆ.
ಹಾಗೆಯೇ, ಮಡಕೇರಿ ಪ್ರದೇಶದಲ್ಲಿ ತರಕಾರಿ, ಉಡುಪುಗಳು, ಔಷಧ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತಿದ್ದು, ಮುಳಿಯ ಕೇಶವ್ ಪ್ರಸಾದ್ ಅವರ ನೇತೃತ್ವದಲ್ಲಿ ಅಗತ್ಯ ವಾಹನ ಸಹಕಾರವನ್ನು ನೀಡಲಾಗುತ್ತಿದೆ. ಹಾಗೂ ಶ್ರೀಮಠದ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಮಠದ ಗೋಮೂತ್ರಾಧಾರಿತ ಮಾಗೋ ಫ್ರೋರ್ ಕ್ಲೀನರ್ ಅವನ್ನು ನೀಡಲು ಉದ್ದೇಶಿಸಿದ್ದು, ಕೇರಳಕ್ಕೆ 2000 ಲೀಟರ್ ಹಾಗೂ ಮಡಕೇರಿ ಭಾಗಕ್ಕೆ 500 ಲೀಟರ್ ಗೋಮೂತ್ರಾಧಾರಿತ ಫ್ರೋರ್ ಕ್ಲೀನರ್ ಒದಗಿಸಲಾಗುತ್ತಿದೆ.
ಅತಿವೃಷ್ಠಿ ನಿವಾರಣೆಗೆ ವಿಶೇಷ ಪ್ರಾರ್ಥನೆ
ದಕ್ಷಿಣ ಕನ್ನಡ ಹಾಗೂ ಮಡಿಕೇರಿಯ ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಭೂಕುಸಿತದಿಂದ ಗೋವು ಹಾಗೂ ಜನರಿಗೆ ಉಂಟಾಗುತ್ತಿರುವ ಸಂಕಷ್ಟ ಪರಿಹಾರಕ್ಕೆ ರಾಮಚಂದ್ರಾಪುರಮಠದ ಶ್ರೀಕರಾರ್ಚಿತ ದೇವತಾ ದಿವ್ಯ ಸನ್ನಿಧಿಯಲ್ಲಿ ಹರಕೆ ಪ್ರಾರ್ಥನೆ ಮಾಡಿಕೊಳ್ಳಲಾಯಿತು.
ಹವ್ಯಕ ಮಹಾಮಂಡಲ, ಅಖಿಲ ಹವ್ಯಕ ಮಹಾಸಭಾ ಹಾಗೂ ಶ್ರೀಮಠದ ಕಾಮದುಘಾ ವಿಭಾಗದಿಂದ ಶ್ರೀಕರಾರ್ಚಿತ ರಾಮದೇವರು, ಚಂದ್ರಮೌಳೀಶ್ವರ ಹಾಗೂ ರಾಜರಾಜೇಶ್ವರಿ ದೇವತಾ ದಿವ್ಯಸನ್ನಿಧಿಯಲ್ಲಿ ಮುನಿದ ಪ್ರಕೃತಿಯು ಬೇಗನೇ ಶಾಂತವಾಗಿ; ಜನತೆಗೆ ಕ್ಷೇಮವಾಗಬೇಕು ಎಂದು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು.
ಈ ಕುರಿತು ಮಹಾರುದ್ರ ಸೇವೆ, ಲಕ್ಷ ಕುಂಕುಮಾರ್ಚನೆ, ಲಲಿತಾ ಹವನ, ಶ್ರೀಕರಾರ್ಚಿತ ದೇವರ ಸಮಗ್ರ ಪೂಜಾಸೇವೆ ಹಾಗೂ ಶ್ರೀಗುರು ಭಿಕ್ಷಾ ಸೇವೆಗಳನ್ನು ಶ್ರೀಗಳ ಮಾರ್ಗದರ್ಶನದಲ್ಲಿ ನಡೆಸಲಾಗುವುದು ಎಂಬ ಹರಕೆಯೊಂದಿಗೆ ಜನತೆಯ ಕ್ಷೇಮವನ್ನು ಪ್ರಾರ್ಥಿಸಲಾಯಿತು.
ಕಾಮದುಘಾದ ಪರವಾಗಿ ಡಾ. ವೈ.ವಿ. ಕೃಷ್ಣಮೂರ್ತಿ, ಹವ್ಯಕ ಮಹಾಸಭೆಯ ಪರವಾಗಿ ಶ್ರೀಮತಿ ಈಶ್ವರೀ ಬೇರ್ಕಡವು, ಹರಿಪ್ರಸಾದ್ ಪೆರಿಯಾಪ್ಪು ಹಾಗೂ ಅಖಿಲ ಹವ್ಯಕ ಮಹಾಸಭೆಯ ಪರವಾಗಿ ಡಾ. ಗಿರಿಧರ್ ಕಜೆ ಮತ್ತಿತರರು ಶ್ರೀಸನ್ನಿಧಿಯಲ್ಲಿ ಪ್ರಾರ್ಥಿಸಿದರು.
Discussion about this post