ಢಾಕಾ: ಭಾರತ ಹಲವು ರಾಜ್ಯಗಳಲ್ಲಿ ಅಬ್ಬರಿಸಿ, ಹಲವರನ್ನು ಬಲಿ ಪಡೆದ ಫನಿ ಚಂಡ ಮಾರುತ ಈಗ ಬಾಂಗ್ಲಾದೇಶದತ್ತ ತಿರುಗಿದ್ದು, ಮಾರುತದ ರುದ್ರನರ್ತನಕ್ಕೆ 14 ಮಂದಿ ಬಲಿಯಾಗಿದ್ದಾರೆ.
ಈ ಕುರಿತಂತೆ ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿದ್ದು, ಈಗಾಗಲೇ ಬಾಂಗ್ಲಾದಲ್ಲಿ 14 ಮಂದಿ ಬಲಿಯಾಗಿದ್ದು, 63 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಾಂಗ್ಲಾ ಕರಾವಳಿಗೆ ಅಪ್ಪಳಿಸಿರುವ ಫೋನಿ ಚಂಡಮಾರುತ ಇಲ್ಲಿನ ನೊವಾಖಲಿ, ಭೋಲಾ ಮತ್ತು ಲಕ್ಷ್ಮಿಪುರ್ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಈ ಜಿಲ್ಲೆಗಳಲ್ಲಿ ಅಧಿಕ ಸಾವು-ನೋವುಗಳೂ ಸಹ ವರದಿಯಾಗಿವೆ. ಮೃತರಲ್ಲಿ ಎರಡು ವರ್ಷದ ಮಗವೂ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ವಿಚಾರವಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿರುವಂತೆ ಫೋನಿ ಚಂಡಮಾರುತ ಅಬ್ಬರಕ್ಕೆ ಬಾಂಗ್ಲಾದೇಶದಲ್ಲಿ 14 ಮಂದಿ ಬಲಿಯಾಗಿದ್ದಾರೆ ಎಂದು ವರದಿ ಮಾಡಿದೆ.
ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ತೀರ ಪ್ರದೇಶದ ಸುಮಾರು 16 ಲಕ್ಷ ಜನರನ್ನು 4,000 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರೂ ಪ್ರಾಣಹಾನಿ ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Discussion about this post