ಮಹಾಭಾರತದಲ್ಲಿ ಪ್ರಭು ಶ್ರೀಕೃಷ್ಣನು ಅರ್ಜುನನನ್ನು ಅನೇಕ ಬಾರಿ ‘ಹೇ ಗುಡಾಕೇಶಿ’ ಎಂದು ಸಂಬೋಧಿಸಿದ್ದಾನೆ.
ಏನಿದು ಗುಡಾಕೇಶಿ? ಈ ಲೇಖನವನ್ನು ಓದಿ ನೋಡಿದ ನಂತರ ನೀವು ಇದನ್ನು ನಿಮಗಿಷ್ಟವಾದವರಲ್ಲಿ ಹೋಲಿಕೆ ಮಾಡಿದರೆ ನಿಶ್ಚಿತವಾಗಿಯೂ ನರೇಂದ್ರಮೋದಿಗೆ ಹೋಲಿಸಿಬಿಟ್ಟರೆ ಆಶ್ಚರ್ಯಪಡಬೇಕಾಗಿಲ್ಲ. ಯಾರೋ ಬೆಣ್ಣೆಯೊಳಗೆ ಕಲ್ಲು ಹುಡುಕುವವರ ವಿಚಾರ ಸಾಯಲಿ ಬಿಡಿ.
ಹಾಗಾದರೆ ಗುಡಾಕೇಶಿ ಎಂಬ ಪದವನ್ನು ಕೃಷ್ಣನು ಅರ್ಜುನನಿಗೆ ಹೇಳಬೇಕಾದರೆ ಅರ್ಜುನನ ವ್ಯಕ್ತಿತ್ವ ವಿಶೇಷವೇನು ಎಂಬುದನ್ನು ನೋಡೋಣ ಬನ್ನಿ.
ಗುಡಾಕೇಶಿ ಎಂದರೆ ನಿದ್ರೆಯನ್ನು ಜೈಸಿದವ. ಮೃತ್ಯುಂಜಯ ಎಂದರೆ ಮೃತ್ಯುವನ್ನು ಜೈಸಿದವ. ಮೃತ್ಯುವನ್ನು ಜೈಸುವಲ್ಲಿ ಎರಡು ವಿಧವಿದೆ.
ಮೊದಲನೆಯದು ಕಂಡ ಕಂಡಲ್ಲಿ ಮುಕ್ಕುತ್ತಾ, ಮಾಡಬಾರದ್ದನ್ನು ಮಾಡುತ್ತಾ ಇರುವ ಶ್ರೀಮಂತನೊಬ್ಬ ರೋಗಗ್ರಸ್ತನಾಗಿ ತನ್ನ ಧನ ಬಲದಿಂದ ನಿತ್ಯ ವೈದ್ಯೋಪಚಾರದ ಮೂಲಕ ಆಯುವೃದ್ಧಿ ಮಾಡಿಕೊಂಡು ವೇದನಾಯುಕ್ತವಾಗಿ ಮೃತ್ಯುವನ್ನು ಜೈಸುತ್ತಾನೆ. ಇವನನ್ನೂ ಮೃತ್ಯುಂಜಯ ಎನ್ನಬಹುದು.
ಇನ್ನೊಬ್ಬ ಮಹಾತ್ಮನಾಗುವವನು ಮೃತ್ಯುವನ್ನು ಹೇಗೆ ಜೈಸುತ್ತಾನೆ ಎಂದರೆ, ಆಹಾರ ವ್ಯವಹಾರ ನಿಯಮದಲ್ಲಿ ಪಥ್ಯವನ್ನು ಪಾಲಿಸುತ್ತಾ, ಇನ್ನೊಬ್ಬನಿಗೆ Hurt ಮಾಡದೆ ಸ್ವಚ್ಛವಾದ ಆರೋಗ್ಯ ಪೂರ್ಣವಾದ, ವೇದನಾ ರಹಿತವಾದ ದೀರ್ಘಾಯುವಾಗಿ ಮೃತ್ಯುವನ್ನು ಜೈಸುತ್ತಾನೆ.
ಅದೇ ರೀತಿಯಾಗಿ ನಿದ್ರೆಯನ್ನು ಜೈಸುವವರಲ್ಲೂ ಎರಡು ವಿಧಗಳಿವೆ. ಮೊದಲನೆಯವನು ಕಣ್ಣಿಗೆ ಕಣ್ಣಿಟ್ಟು, ಸಾಧನೆಯಲ್ಲಿ ಪ್ರಯತ್ನ ಪೂರ್ವಕವಾಗಿ ನಿದ್ರೆಯನ್ನು ಜೈಸುತ್ತಾನೆ. ಆದರೆ ಬಳಲುತ್ತಾನೆ, ರೋಗಿಷ್ಟನೂ ಆಗುತ್ತಾನೆ. ನಂತರ ಒಂದೊಮ್ಮೆ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.
ಎರಡನೆಯವನು ಹಾಗಲ್ಲ. ಕರ್ಮಾಸಕ್ತ, ಧರ್ಮಾಸಕ್ತ, ಶ್ರವಣಾಸಕ್ತನಾಗಿ ನಿದ್ರೆಯನ್ನು ಮರೆತು ಜೈಸುತ್ತಾನೆ. ಮಹಾಭಾರತದ ಅರ್ಜುನನಲ್ಲಿ ಶ್ರೀಕೃಷ್ಣನು ಕಂಡದ್ದು ಇದನ್ನು. ಧರ್ಮ ಸಂರಕ್ಷಣೆಗಾಗಿ ತನ್ನ ನಿದ್ರೆಯನ್ನೂ(ನಿದ್ರೆ ಎಂದರೆ ಆಲಸ್ಯ) ಮರೆತು ಧರ್ಮರಕ್ಷಣೆ ಮಾಡುವ ಆಸಕ್ತಿವಂತನೇ ಅರ್ಜುನ. ಪ್ರಜಾ ರಕ್ಷಣೆ, ದೇಶ ರಕ್ಷಣೆ ಇವೆಲ್ಲವೂ ಆಸಕ್ತಿಯಾಗಿದ್ದಲ್ಲಿ ಅಲ್ಲಿ ನಿದ್ರೆ ಆಲಸ್ಯಗಳು ಗೌಣ.
ಇಂತಹ ಒಂದು ಅಮೂಲ್ಯ ಗುಣ ಇರಬೇಕಾದರೆ ಆಹಾರ ವ್ಯವಹಾರ ಪಥ್ಯಗಳಿರಬೇಕು. ಕರ್ಮಾಸಕ್ತಿ ಇರಬೇಕು. ದೇಶದ ಪರಿಕಲ್ಪನೆ, ಪ್ರಜೆಗಳ ಅಭಿವೃದ್ಧಿಯ ಕಲ್ಪನೆಗಳಿದ್ದಾಗ ದಿನದ 24 ಘಂಟೆಗಳಲ್ಲಿ ಕೇವಲ ಐದು ಘಂಟೆಯ ವಿಶ್ರಾಂತಿಯೂ ಸಾಕಾದೀತು.
ಮೋದಿಯಲ್ಲಿ ಇವುಗಳಿವೆ
ದೇವೇಂದ್ರನಿಗೆ ಸಹಸ್ರಾಕ್ಷ ಎಂಬ ಹೆಸರಿದೆ. ಅಂದರೆ ದೇಹದ ರಸ ಗಂದ ಸ್ಪರ್ಷ, ಶ್ರವಣ, ದೃಷ್ಟಿಗಳೆಲ್ಲವೂ ಅವನಿಗೆ ಚಕ್ಷುಗಳಾಗಿ ಕೆಲಸ ಮಾಡುತ್ತವೆ. ದೇಶ ಎಂದ ಮೇಲೆ ಅಲ್ಲಿ ಅಭಿವೃದ್ಧಿಯ ವೃದ್ಧಿ ಕ್ಷಯಗಳು ಅಭಿವೃದ್ಧಿಗೆ ಭಂಗ ತರುವ ವಿಚಾರದ ಮೇಲಿರುತ್ತದೆ. ಅಂದರೆ ಅಭಿವೃದ್ಧಿಗೆ ಭಂಗ ತರುವವರ ನಿಗ್ರಹವೂ ಬೇಕು, ಅಭಿವೃದ್ಧಿಯ ಕಾರ್ಯಗಳೂ ಬೇಕು. ಇದನ್ನು ನರೇಂದ್ರ ಮೋದಿಯವರಲ್ಲಿ ಪ್ರತ್ಯಕ್ಷ ಕಾಣಬಹುದು.
ನಮ್ಮಂತಹ ಜ್ಯೋತಿಷ್ಯರು ಅವರ ಕುಂಡಲಿ ನೋಡಿ ನಿರ್ಧಾರ ಮಾಡುತ್ತಾರೆ. ಇದು ಕಣ್ಣಿಗೆ ಕಾಣದಂತಹ ವಿಚಾರ. ಇಲ್ಲಿನ ತೀರ್ಮಾನವು ಕಣ್ಣಿಗೆ ಕಾಣುವಂತಹ ಚಟುವಟಿಕೆಗಳ ಮೂಲಕ ಪ್ರಕಟವಾಗುತ್ತದೆ. ಇದೆಲ್ಲವೂ ಪೂರ್ವ ಕರ್ಮಾಜಿತ ಪುಣ್ಯವೂ, ದೈವದತ್ತವಾಗಿ ಬಂದಿರುವಂತದ್ದೂ ಆಗಿರುತ್ತದೆ. ಯಾರೋ ಮೂರ್ಖಚಿಂತನೆ ಮಾಡುವವರು, ಇದು ಮೋದಿಯ ಪರವಾಗಿ ಪ್ರಚಾರ ಎನ್ನಬಹುದು. ಆದರೆ ಇದು ಮೋದಿಯವರೊಳಗಿನ ಸದ್ಗುಣಗಳು.
ಹಿಂದೆ ರಾಮನನ್ನೂ ಹಳಿಯುವವರಿದ್ದರು. ಕೃಷ್ಣನ ನಿಂದಕರೂ ಇದ್ದರು. ಅವರು ಚರಿತ್ರೆಯ ಪುಟಗಳಿಂದ ಯಾವತ್ತೋ ಮಾಯವೂ ಆದರು ಅಥವಾ ಇಂದಿಗೂ ಅವರ ಹೆಸರು ಕುಖ್ಯಾತಿಯ ಪಟ್ಟಿಯಲ್ಲೇ ಇದೆ. ಈಗಲೂ ಅಂತವರಿದ್ದಾರೆ. ಇವರಿಗೆ ಒಂದಷ್ಟು ಗಂಜಿ ಸಿಕ್ಕರೆ ಸಾಕು. ಆ ಗಂಜಿಯನ್ನು ನಾವೇ ಕೊಟ್ಟು ಅವರ ಬಾಯಿ ಮುಚ್ಚಿಸಿದರೆ ಕಲಹ ರಹಿತ ಸಮಾಜವಾದೀತು. ಅವರು ಸೈದ್ಧಾಂತಿಕ ನೆಲೆಯಲ್ಲಿ ಮೋದಿಯವರ ನಿಂದನೆ ಮಾಡುತ್ತಿಲ್ಲ. ಅವರಿಗೆ ಲಭಿಸಿದ ಗಂಜಿಯ ಆಧಾರದಲ್ಲಿ ಹೇಳುತ್ತಾರಷ್ಟೆ.
Discussion about this post