ಹೌದು…! ಅವರು ರಾಷ್ಟ್ರವೇ ಹೆಮ್ಮೆ ಪಡುವಂತಹ ಒಬ್ಬ ಶ್ರೇಷ್ಠ ಪ್ರಧಾನಿಮಂತ್ರಿಯಾಗಿದ್ದವರು. ಮಾತ್ರವಲ್ಲ ಅದ್ಬುತ ಕವಿ ಕೂಡಾ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಭಾರತ ದೇಶ ಮಾತ್ರವೇಕೆ, ಪ್ರಪಂಚವೇ ಕಂಡಂತಹ ಶ್ರೇಷ್ಠ ನಾಯಕ ಹಾಗೂ ಪ್ರಧಾನಮಂತ್ರಿಗಳಲ್ಲಿ ಒಬ್ಬರು. ಅವರೇ ಮಾಜಿ ಪ್ರಧಾನಮಂತ್ರಿ, ಹಿರಿಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ.
ರಾಷ್ಟ್ರ ಕಂಡಂತಹ ಅದ್ಬುತ ಆಡಳಿತಗಾರರಲ್ಲಿ ಅಟಲ್ ಜೀ ಅಗ್ರಗಣ್ಯರು. ದೇಶದ ಹಿತಕ್ಕಾಗಿ ಇವರು ತೆಗೆದುಕೊಂಡ ನಿರ್ಧಾರಗಳು ಹಾಗೂ ಮಾಡಿದ ಕಾರ್ಯಗಳು ಸರ್ವಮಾನ್ಯವಾಗಿದೆ. 2005ರಲ್ಲಿ ರಾಜಕೀಯ ಜೀವನದಿಂದ ನಿವೃತ್ತಿ ಘೋಷಿಸಿಕೊಂಡು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ರೀತಿಯಿಂದಲೇ ವಿರೋಧಿಗಳಿಂದಲೂ ಭಾರತದ ಹಿರಿಯ ಪ್ರಜೆ, ರಾಜಕಾರಣಿಗಳಲ್ಲೇ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ದಿ ಎಂದು ಕರೆಸಿಕೊಂಡ ಭಾರತದ ಏಕೈಕ ರಾಜಕಾರಣಿ ಅಟಲ್ ಜೀ. ಇದರಿಂದ ಭಾರತದಾದ್ಯಂತ ಅಜಾತಶತ್ರು ಎಂದು ಕರೆಯಲ್ಪಟ್ಟಿದ್ದಾರೆ.
ಎ ರೈಟ್ ವ್ಯಾನ್ ಇನ್ ಎ ರಾಂಗ್ ಪಾರ್ಟಿ ಎಂಬ ವಿಶೇಷಣ ವಾಜಪೇಯಿಯವರ ಬಗ್ಗೆ ಗಣ್ಯರು ಆಡಿರುವ ಅಣಿಮುತ್ತುಗಳು. ಇಂತಹ ಅಟಲ್ ಅವರಿಗೆ ಪದ್ಮ ವಿಭೂಷಣ, ಲೋಕಮಾನ್ಯ ತಿಲಕ್ ಪ್ರಶಸ್ತಿ, ಉತ್ತಮ ರಾಜಕೀಯ ಪಟು ಗೌರವ ಹಾಗೂ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಅತ್ಯುತ್ತಮ ಆಡಳಿತವನ್ನು ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ತಂದುಕೊಟ್ಟ ಶ್ರೇಷ್ಠ ಆಡಳಿತಗಾರರಾದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತರತ್ನ ನೀಡಬೇಕು ಎಂದು ಹಲವು ವರ್ಷಗಳಿಂದ ಕೂಗು ಕೇಳಿಬಂದಿರುವುದು ಸೂಕ್ತವಾಗಿತ್ತು.
ಯಾವುದೇ ರೀತಿಯಿಂದ ನೋಡಿದರೂ ಅಟಲ್ಜಿ ಭಾರತರತ್ನ ಪ್ರಶಸ್ತಿಗೆ ಅರ್ಹರು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಇರುವಲ್ಲಿಯವರೆಗೂ ಅಟಲ್ ಜೀಗೆ ಭಾರತ ರತ್ನ ಕೊಡುವ ಮನಸ್ಸನ್ನು ಮಾಡಲೇ ಇಲ್ಲ. ಆದರೆ, ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಬಂದ ನಂತರ ಮಹತ್ವದ ನಿರ್ಧಾರ ಕೈಗೊಂಡು, ವಾಜಪೇಯಿ ಅವರಿಗೆ ಭಾರತರತ್ನ ಘೋಷಿಸಿದೆ. ಇದರಂತೆ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸ್ವತಃ ವಾಜಪೇಯಿ ಅವರ ನಿವಾಸಕ್ಕೆ ತೆರಳಿ 2015ರ ಮಾರ್ಚ್ 27ರಂದು ಭಾರತ ರತ್ನ ಪ್ರದಾನ ಮಾಡಿದರು.
ಬಹುಷಃ ಅಟಲ್ ಅವರಿಗೆ ಭಾರತರತ್ನ ನೀಡಿದ್ದು, ಪ್ರಶಸ್ತಿಯ ಬೆಲೆಯೇ ಹೆಚ್ಚಾಗಿದೆ ಎಂದರೆ ನಿಜಕ್ಕೂ ಅತಿಶಯೋಕ್ತಿಯಲ್ಲ.
ಅಟಲ್ಜಿಯವರ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ಹಲವು ಹಿನ್ನೆಡೆಗಳನ್ನು ಎದುರಿಸಿದರೂ, ದೇಶವಾಸಿಗಳ ಎದುರಲ್ಲಿ ಎಂದೂ ಚಿಕ್ಕವರಾಗಲಿಲ್ಲ. ಇಂದಿಗೂ ಬಿಜೆಪಿಯನ್ನು ಒಪ್ಪದವರು ಅಟಲ್ ಅವರನ್ನು ಸ್ವೀಕರಿಸುತ್ತಾರೆ. ಅಷ್ಟು ಮಾತ್ರವೇಕೆ 2004ರಲ್ಲಿ ವಾಜಪೇಯಿ ಸರ್ಕಾರ ಸೋತಾಗ ನಮಗೂ ಬೇಸರವಾಯಿತು ಎಂದು ಶತ್ರು ರಾಷ್ಟ್ರ ಪಾಕೀಸ್ತಾನದ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಹೇಳುತ್ತಾರೆಂದರೆ ವಾಜಪೇಯಿಯವರ ವ್ಯಕ್ತಿತ್ವ ಎಂತಹದ್ದಿರಬಹುದು.
Discussion about this post