ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಹಲವು ಕಡೆಗಳಲ್ಲಿ ಶಾಲಾ ಬಸ್’ಗಳಲ್ಲಿ #SchoolBus ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದ್ದು, ತತಕ್ಷಣದಿಂದಲೇ ಇದರಲ್ಲಿನ ಅಂಶಗಳನ್ನು ಶಾಲೆಗಳು ಪಾಲಿಸಬೇಕು. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು #BEO ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಶಾಲೆ ತಪ್ಪಿದಲ್ಲಿ ಅಂತಹ ಸಂಸ್ಥೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಶಾಲಾ ಆಡಳಿತ ಮಂಡಳಿಗಳು ವಿವರಗಳನ್ನು ಪ್ರತಿ ವರ್ಷ ಬಿಇಒಗಳಿಗೆ ನೀಡಬೇಕು ಎಂದು ಸೂಚಿಸಿದೆ.
ರಾಜ್ಯ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು ರಾಜ್ಯ ಸರ್ಕಾರವು ಉಚಿತವಾಗಿ ಸನ್ನಡತೆಯ ಪ್ರಮಾಣಪತ್ರವನ್ನು ನೀಡಬೇಕೆಂದು ಒತ್ತಾಯಿಸಿವೆ.
ಈ ಕುರಿತಂತೆ ಮಾತನಾಡಿರುವ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಖಾಸಗಿ ಶಾಲೆಗಳಲ್ಲಿ, ಚಾಲಕರು #Driver ಆಗಾಗ್ಗೆ ಕೆಲಸ ಬಿಡುತ್ತಿರುತ್ತಾರೆ. ಕೆಲವೊಮ್ಮೆ ಎರಡು ತಿಂಗಳಿಗಿಂತ ಹೆಚ್ಚು ಕಾಲ ಕೆಲಸದಲ್ಲಿರುವುದಿಲ್ಲ. ಹೀಗಾಗಿ, ಪ್ರತಿಬಾರಿಯೂ ಪ್ರಮಾಣಪತ್ರಗಳನ್ನು ಪಡೆಯುವುದು ಸಂಸ್ಥೆಗಳಿಗೆ ಹೊರೆಯಾಗುತ್ತದೆ. ಹೀಗಾಗಿ, ಇದನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
- ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನ ಚಾಲಕರು ಹಾಗೂ ಸಹಾಯಕರು ಸ್ಥಳೀಯ ಪೊಲೀಸರಿಂದ ಸನ್ನಡತೆಯ ಪ್ರಮಾಣಪತ್ರ ಪಡೆದು ಶಿಕ್ಷಣ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು.
- ಚಾಲಕರು ಹಾಗೂ ಸಹಾಯಕರು ಸನ್ನಡೆತೆ ಹಾಗೂ ಮಾನಸಿಕ ಸ್ಥಿತಿಯ ಕುರಿತಾಗಿ ಪ್ರಮಾಣಪತ್ರವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ನವೀಕರಿಸಿ ಇಲಾಖೆಗೆ ಸಲ್ಲಿಸಬೇಕು.
- ಈ ರೀತಿ ಪಡೆದ ಪ್ರಮಾಣಪತ್ರಗಳನ್ನು ಶಾಲೆಯ ಎಸ್’ಎಟಿಎಸ್ ತಂತ್ರಾಾಂಶದಲ್ಲಿ ಅಪ್’ಲೋಡ್ ಮಾಡಬೇಕು.
- ಎಲ್ಲ ರೀತಿಯ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ.
- ಖಾಸಗಿ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕರೆತರಲು ಹಾಗೂ ಬಿಟ್ಟುಬರಲು ಮಹಿಳಾ ಸಹಾಯಕಿರನ್ನೇ ನೇಮಕ ಮಾಡಿಕೊಳ್ಳಬೇಕು.
- ಶಾಲಾ ವಾಹನಗಳನ್ನು ನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆತಂದಾಗ ಮತ್ತು ಮಕ್ಕಳನ್ನು ಮನೆಗಳಿಗೆ ಬಿಟ್ಟ ನಂತರ ಶಾಲೆಗೆ ವಾಪಸ್ ಬಂದು, ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿಯೇ ಹಾಜರಾತಿ ಪುಸ್ತಕಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು.
- 2012ರಲ್ಲಿ ತಿದ್ದುಪಡಿ ಮಾಡಿದ ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ಅಡಿಯಲ್ಲಿ ಪ್ರತಿ ವಾಹನಕ್ಕೆ ನಿರ್ದಿಷ್ಟಪಡಿಸಿದ ಮಕ್ಕಳನ್ನಷ್ಟೇ ಹತ್ತಿಸಬೇಕು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post