ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಪ್ರತಿಯೊಬ್ಬರು ಅಯೋಡಿನ್‍ಯುಕ್ತ ಉಪ್ಪನ್ನು ಆಹಾರದಲ್ಲಿ ಬಳಸಿ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಮಿಲ್ಲರ್‍ಪೇಟೆ ನಗರ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಜಾಗೃತಿ ಸಪ್ತಾಹ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲೆ ಕೋಸು,(ಕ್ಯಾಬೇಜ್) ಹೂ ಕೋಸುಗಳ, ಅತೀ ಬಳಕೆಯಿಂದ ಐಯೋಡಿನ್ ಕೊರತೆ ಆಗಬಹುದು. ಈ ಹಿನ್ನಲೆಯಲ್ಲಿ 2011 ರಲ್ಲಿ ಕೆಂದ್ರ ಸರ್ಕಾರ ಉಪ್ಪಿನ ಮೂಲಕ ಕಡ್ಡಾಯವಾಗಿ ಐಯೋಡಿನ್ ಸೇರ್ಪಡೆಗೊಳಿಸಿ ಕಾನೂನು ರೂಪಿಸಿದ ನಂತರ ಇಂದು ಮಾರುಕಟ್ಟೆಯಲ್ಲಿ ಐಯೋಡಿನ್‍ಯುಕ್ತ ಉಪ್ಪು ಲಭ್ಯವಾಗುತ್ತಿದೆ ಎಂದು ತಿಳಿಸಿದರು.
ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 193996 ಉಪ್ಪಿನ ಮಾದರಿಗಳನ್ನು ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ರಾಜ್ಯಮಟ್ಟಕ್ಕೆ 150 ಮಾದರಿಗಳನ್ನು ಕಳುಹಿಸಿಲಾಗಿದೆ. ಆರೋಗ್ಯ ಇಲಾಖೆಯ ತಂಡ ಮನೆ ಮನೆಗೆ ಭೇಟಿ ನೀಡಿ ಉಪ್ಪಿನ ಮಾದರಿಯನ್ನು ಸಂಗ್ರಹಿಸಿ ಅಯೋಡಿನ್ ಪ್ರಮಾಣವನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸೌಜನ್ಯ ಅವರು ಮಾತನಾಡಿ, ಅಯೋಡಿನ್ ಕೊರತೆಯಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಅಯೋಡಿನ್ ಅಂಶ ದೊರೆಯದಿದ್ದಾಗ ಥೈರಾಯಿಡ್ ಗ್ರಂಥಿಯ ಗಾತ್ರ ಹೆಚ್ಚಾಗುತ್ತದೆ. ಆದ್ದರಿಂದ ದಿನನಿತ್ಯದ ಪ್ರಮಾಣವಾಗಿರುವ ವಯಸ್ಕರಿಗೆ 150 ಮೈಕೋಗ್ರಾಂ, ಗರ್ಭಿಣಿ ಬಾಣಂತಿಯರಿಗೆ 200 ಮೈಕೋಗ್ರಾಂ, 0-11 ತಿಂಗಳ ಮಕ್ಕಳಿಗೆ 50 ಮೈಕೋಗ್ರಾಂ, 12-59 ತಿಂಗಳ ಮಕ್ಕಳಿಗೆ 90 ಮೈಕೋಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕೋಗ್ರಾಂ ಉಪ್ಪಿನ ಜೊತೆಗೆ ಸೇವಿಸುವ ಮೂಲಕ ಉಪಯೋಗಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಆಹಾರ ಪದಾರ್ಥಗಳಾದ ಹಾಲು, ಮೊಟ್ಟೆ, ಕ್ಯಾರೆಟ್, ಹಸಿರು ತರಕಾರಿಗಳು, ಸೀಗಡಿ, ಮೀನು, ಹಣ್ಣುಗಳು, ಸ್ಪೀನ್ಯಾಚ್, ಅಯೋಡಿನ್‍ಯುಕ್ತ ಉಪ್ಪು ಇವುಗಳನ್ನು ತಪ್ಪದೇ ಸೇವಿಸಿ ಅಯೋಡಿನ್ ಅಂಶವನ್ನು ಪಡೆಯಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಲ್ಲಿ ಇರುವ ಅಯೋಡಿನ್ ಪ್ರಮಾಣ ಪರೀಕ್ಷೆಯ ಪ್ರಾತ್ಯಕ್ಷತೆಯನ್ನು ಮಾಡಿ ಮಕ್ಕಳಿಗೆ ತೋರಿಸಲಾಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಮುಖ್ಯ ಗುರುಗಳಾದ ಕೆ.ಶೋಭ, ಶಿಕ್ಷಕರಾದ ಮುಕ್ತಿಯಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಸಿಬ್ಬಂದಿಗಳಾದ ಗೋವಿಂದಪ್ಪ, ಕೆ.ಎಮ್.ಶಿವಕುಮಾರ್, ತಿಪ್ಪೇಸ್ವಾಮಿ, ಖಾಸೀಂವಲಿ, ಶರತ್‍ಕುಮಾರ್, ಉಮಾಮಹೇಶ್ವರಿ, ಸಿದ್ದನಗೌಡ, ನೀಲುಫರ್, ಪ್ರತಿಭಾ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post