ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೇಕೆದಾಟು #Mekedaatu ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ #DCM D K Shivakumar ಅವರು ತಿಳಿಸಿದರು.
ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರುವ ಸರಕಾರಿ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿಯೂ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

Also read: ಸಿಕ್ಕ ಸಿಕ್ಕ ಕೋಚಿಂಗ್ ಕ್ಲಾಸ್’ಗೆ ಸೇರುವ ಮುನ್ನ ಎಚ್ಚರ ! 24 ತರಬೇತಿ ಸಂಸ್ಥೆಗಳಿಗೆ ಬಿತ್ತು 77.60 ಲಕ್ಷ ದಂಡ
ಸಂವಿಧಾನ ಬದಲಿಸುವ ಹೇಳಿಕೆ ಕೊಟ್ಟಿದ್ದರೆ ಇಂದೇ ರಾಜಕೀಯ ನಿವೃತ್ತಿ
ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ತಲೆಕೆಟ್ಟಿಲ್ಲ. ನಾನು ಸಂದರ್ಶನದಲ್ಲಿ ಸತ್ಯ ಮಾತನಾಡಿರುವುದನ್ನು ಹಾಗೂ ನನ್ನ ರಾಜಕೀಯ ನಿಲುವನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ನಾನು ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ಜಾರಿಗೆ ತಂದವರು ನಾವು, ನಾವು ಅದನ್ನು ರಕ್ಷಣೆ ಮಾಡುತ್ತಿದ್ದೇವೆ. ಬಿಜೆಪಿಯವರು ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ದಡ್ಡರಲ್ಲ, ನಾನು ಏನು ಮಾತನಾಡಿದ್ದೇನೆ ಎಂದು ಅವರು ನೋಡಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿ ಅವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳಿ ಎಂದು ಮಾಧ್ಯಮ ಹಾಗೂ ರಾಜಕೀಯ ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ” ಎಂದರು.

ನೀವು ಹೋದ ಕಡೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿಯವರು ನಿರ್ಧರಿಸಿದ್ದಾರಂತೆ ಎಂದು ಕೇಳಿದಾಗ, “ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನ್ನ ಬಗ್ಗೆ ಮಾತನಾಡದಿದ್ದರೆ, ಅವರಿಗೆ ನಿದ್ದೆ ಬರುವುದಿಲ್ಲ. ಅದಕ್ಕಾಗಿ ಮಾತನಾಡುತ್ತಾರೆ, ಮಾತನಾಡಲಿ. ತಮಿಳುನಾಡಿನಲ್ಲಿ ಕಪ್ಪು ಬಾವುಟ ನೋಡಬೇಕು ಎಂದು ಕಾದು ಕುಳಿತಿದ್ದೆ. ನನಗೆ ಮಾಧ್ಯಮಗಳ ಮೈಕ್ ಹೊರತಾಗಿ ಯಾವ ಕಪ್ಪು ಬಾವುಟವೂ ಕಾಣಲಿಲ್ಲ” ಎಂದು ತಿಳಿಸಿದರು.

ಫೋನ್ ಟ್ಯಾಪಿಂಗ್ ವಿಚಾರ ಮತ್ತೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಾನು ಜೈಲಲ್ಲಿ ಇದ್ದಾಗ, ನಮ್ಮ ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿದೆ ಎಂಬ ಸುದ್ದಿ ಓದಿದ್ದೆ. ಅದಾದ ನಂತರ ತನಿಖೆ, ಏನೇನೋ ನಡೆಯಿತು. ಈ ವಿಚಾರವಾಗಿ ಸಿಬಿಐ ತನಿಖೆ ಮಾಡಿತ್ತು. ಬಿಜೆಪಿಯವರು ಸಿಬಿಐ ವರದಿಯನ್ನು ಪ್ರಕಟಿಸಲಿ, ಆಮೇಲೆ ಮಿಕ್ಕ ವಿಚಾರ ಮಾತನಾಡೋಣ” ಎಂದರು.
ಸಿಎಂ, ಗೃಹಮಂತ್ರಿಗಳಿಂದ ಎಲ್ಲರಿಗೂ ನ್ಯಾಯ
ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವಾಗಿ ಗೃಹ ಮಂತ್ರಿಗೆ ದೂರು ನೀಡಲು ಮುಂದಾಗಿದ್ದಾರಲ್ಲ ಎಂದು ಕೇಳಿದಾಗ, “ಗೃಹ ಸಚಿವರು ಬಹಳ ಹಿರಿಯರು. ಅವರಿಗೆ ಪಕ್ಷ ನಡೆಸಿ, ಜತೆಗೆ ಸರ್ಕಾರದಲ್ಲೂ ಅನುಭವವಿದೆ. ಅವರು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ತನಿಖೆ ನಡೆಸುವುದಾಗಿ ಸದನದಲ್ಲಿ ಹೇಳಿದ್ದು, ರಾಜಣ್ಣ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ನ್ಯಾಯ ಒದಗಿಸಬೇಕೋ ಒದಗಿಸುತ್ತಾರೆ” ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post