ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ಗ್ರಾಮಾಂತರ |
ದೇವನಹಳ್ಳಿ ಕೋಟೆಯ ಐತಿಹಾಸಿಕ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇದೇ ಡಿ.8 ರಂದು ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಗಮ ಸಂಚಾರ,ಭದ್ರತೆ,ಸ್ವಚ್ಛತೆ,ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲಾ ಏರ್ಪಾಡುಗಳನ್ನು ಅಚ್ಚುಕಟ್ಟಾಗಿ ಯೋಜಿತವಾಗಿ ಕೈಗೊಳ್ಳಬೇಕು.ಉತ್ಸವಕ್ಕಾಗಿ ರಚಿಸಿದ ಎಲ್ಲಾ ಉಪಸಮಿತಿಗಳಲ್ಲಿನ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.
ದೇವನಹಳ್ಳಿಯ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನಡೆದ ಲಕ್ಷದೀಪೋತ್ಸವ ಪೂರ್ವಸಿದ್ಧತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ಹಿನ್ನೆಲೆಯ ಈ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವ ಈ ಭಾಗದಲ್ಲಿ ಬಹಳ ಮಹತ್ವ ಪಡೆದಿದೆ.ಈಗಾಗಲೇ ಸೇವಾ ಸಮಿತಿಯಿಂದ ವೈವಿಧ್ಯಮಯ ಧಾರ್ಮಿಕ,ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ.ಡಿಸೆಂಬರ್ 8 ರಂದು ಮಹಾಭಿಷೇಕ, ತೀರ್ಥಪ್ರಸಾದ, ಸಕಲಾಭರಣಾಲಂಕೃತ ಶ್ರೀವೇಣುಗೋಪಾಲಸ್ವಾಮಿಯ ಚಿತ್ರ ಗೋಪುರೋತ್ಸವ ಜರುಗಲಿದೆ. ಅಂದಿನ ಕಾರ್ಯಕ್ರಮಗಳಲ್ಲಿ ಸುಮಾರು 3 ರಿಂದ 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಸಂಚಾರ, ಭದ್ರತೆ, ನೈರ್ಮಲ್ಯ, ಆರೋಗ್ಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಏರ್ಪಾಡು ಮಾಡಿಕೊಳ್ಳಬೇಕು. ಸಂಚಾರ, ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರು ಮೊದಲಾದ ಮಾಹಿತಿಗಳನ್ನು ಒಳಗೊಂಡ ಮಾರ್ಗದರ್ಶಿ ಫಲಕಗಳನ್ನು ಹಾಕಿ,ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಕ್ರಮವಹಿಸಬೇಕು. ಬೆಸ್ಕಾಂ ಅಧಿಕಾರಿಗಳು ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಗಮನ ನೀಡಬೇಕು. ದೇವನಹಳ್ಳಿಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಡಿಸೆಂಬರ್ 7 ಹಾಗೂ 8 ರಂದು ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
Also read: ತಲೆಮರೆಸಿಕೊಂಡಿದ್ದ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ: ಕೋರ್ಟ್ ಆದೇಶ
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸಂಚಾರ ನಿರ್ವಹಣೆ ಬಹಳ ಜವಾಬ್ದಾರಿಯುತವಾಗಿ ನಡೆಯಬೇಕು.ಡಿ.8 ರಂದು ಸಂಜೆ ನಡೆಯುವ ಆಕರ್ಷಕ ಬಾಣ ಬಿರುಸುಗಳ ಪ್ರದರ್ಶನದ ಸಂದರ್ಭದಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ಲಕ್ಷದೀಪೋತ್ಸವ ಸಮಿತಿಯ ಪದಾಧಿಕಾರಿಗಳು, ದೇವನಹಳ್ಳಿಯ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ, ಸಹಾಯಕ ಪೊಲೀಸ್ ಆಯುಕ್ತ ಬಾಲಕೃಷ್ಣ , ಜಿಪಂ ಉಪಕಾರ್ಯದರ್ಶಿ ಡಾ. ನಾಗರಾಜು, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಜಿ.ಜೆ. ಹೇಮಾವತಿ, ತಹಸೀಲ್ದಾರ ಕೆ. ಶಿವರಾಜು, ಸಂಚಾರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಲಕ್ಷ್ಮಣನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post