ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ (ಶಿವಮೊಗ್ಗ) |
ಬಸವಣ್ಣನವರು (Basavanna) ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ, ಕರುಣೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ ಎಂದು ಶರಣ ಪ್ರಶಾಂತ ಕುಬಸದ ಹೇಳಿದರು.
ಶಿರಾಳಕೊಪ್ಪದ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಶರಣ ಸಾಹಿತ್ಯ (Sharana Sahitya) ಪರಿಷತ್ ವತಿಯಿಂದ ಆಯೋಜಿಸಿದ್ದ ಡಾ. ಶರಾವತಿ ಮತ್ತು ಡಾ. ಮುರುಘರಾಜ್ ದತ್ತಿ ನಿಧಿ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ಸಮತಾವಾದ’ ವಿಷಯ ಕುರಿತು ಅವರು ಮಾತನಾಡಿದರು.
ಬಸವಣ್ಣನವರು ಜಾತಿ, ವರ್ಗ, ಲಿಂಗ ಹಾಗೂ ಮೇಲು-ಕೀಳು ಎಂಬ ಭೇದಭಾವಗಳನ್ನು ವಿರೋಧಿಸಿ, ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಗೌರವ ಮತ್ತು ಅವಕಾಶ ದೊರೆಯಬೇಕು ಎಂಬ ಮಾನವೀಯ ಸಂದೇಶವನ್ನು ಸಾರಿದರು ಎಂದು ತಿಳಿಸಿದರು.
Basavanna: ಕಾಯಕವೇ ಕೈಲಾಸ ತತ್ವ
ಬಸವಣ್ಣನವರ ಚಿಂತನೆಗಳಲ್ಲಿ ‘ಕಾಯಕವೇ ಕೈಲಾಸ’ ಎಂಬ ತತ್ವವು ಶ್ರಮದ ಘನತೆಯನ್ನು ಸಾರುತ್ತದೆ. ದುಡಿಮೆಯಿಂದ ಗಳಿಸಿದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಬಳಸುವ ದಾಸೋಹ ತತ್ವ, ಎಲ್ಲರನ್ನೂ ಸಮಾನವಾಗಿ ಕಾಣುವ ಸಮತಾವಾದ ಹಾಗೂ ಅಂತರಂಗದ ಶುದ್ಧತೆಗೆ ನೀಡಿದ ಮಹತ್ವ ಇಂದಿಗೂ ಪ್ರಸ್ತುತವಾಗಿವೆ ಎಂದು ಶರಣ ಪ್ರಶಾಂತ ಕುಬಸದ ವಿವರಿಸಿದರು.
ವಚನಗಳ ಮೂಲಕ ಸರಳ ಭಾಷೆಯಲ್ಲಿ ಗಂಭೀರ ಸಾಮಾಜಿಕ ಸಂದೇಶಗಳನ್ನು ನೀಡಿದ ಬಸವಣ್ಣನವರು, ಅನುಭವ ಮಂಟಪದ ಮೂಲಕ ಚರ್ಚೆ, ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಿದರು. ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದ್ದು ಅವರ ಪ್ರಗತಿಪರ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.
ಬಸವಣ್ಣನವರ ವಿಚಾರಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪರಸ್ಪರ ಗೌರವ, ಪ್ರೀತಿ, ಸಹಕಾರ ಮತ್ತು ಸಾಮಾಜಿಕ ಸಮಾನತೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಯುವಜನತೆಗೆ ತಲುಪಲಿ ಶರಣರ ತತ್ವಗಳು
ತಾಲೂಕು ಘಟಕದ ಅಧ್ಯಕ್ಷ ಶರಣ ಶಶಿಧರ ಸ್ವಾಮಿ ಎಂ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ನಿಧಿ ಕಾರ್ಯಕ್ರಮಗಳ ಮೂಲಕ ಶರಣರ ತತ್ವ ಹಾಗೂ ವಿಚಾರಗಳನ್ನು ಯುವಜನಾಂಗಕ್ಕೆ ತಲುಪಿಸುವ ಕೆಲಸವಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಶರಣರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾಯಕವನ್ನು ಮಾಡಬೇಕು ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಶರಣ ಪ್ರಭುಸ್ವಾಮಿ ಆನೆಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಘಟಕದ ಅಧ್ಯಕ್ಷ ಶರಣ ಚಂದ್ರಶೇಖರ್ ಸುರಹೊನ್ನೆ ಅಧ್ಯಕ್ಷತೆ ವಹಿಸಿದ್ದರು.
Also Read>> ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತ ನೀಡಿದ ಸಂದೇಶ ಏನು? | ಪ್ರಧಾನಿ ಮೋದಿ
ಸಾಧಕರಿಗೆ ಗೌರವ
ಪ್ರಸ್ತುತ ಸಾಲಿನ ಶಿವಮೊಗ್ಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶರಣ ರಂಗರಾಜು ದೇವರನ್ನು ಹಾಗೂ ಉಡುತಡಿಯ ಅಕ್ಕಮಹಾದೇವಿ ಸಮಿತಿಯ ಕಾರ್ಯದರ್ಶಿ ಮತ್ತು ಹಿರಿಯರಾದ ಶರಣೆ ಗೌರಮ್ಮ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ದತ್ತಿ ದಾನಿಗಳಾದ ಡಾ. ಮುರುಘರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಟಿ.ಎಂ. ಮಂಜಣ್ಣ, ಅಕ್ಕಮಹಾದೇವಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಶರಣೆ ರೂಪಾ ಹಾಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶರಣ ಮಲ್ಲಿಕಾರ್ಜುನ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ನೆರವೇರಿಸಿದರು. ಶರಣ ಮುರುಗೇಶ್ ಸ್ವಾಗತಿಸಿದರು. ಶರಣ ಅಶೋಕ್ ಹಿರೇಮನಿ ಶರಣು ಸಮರ್ಪಿಸಿದರು. ಶರಣೆ ಲತಾ ಯೋಗಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











