ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗ್ರಾಮಾಂತರ ಪ್ರದೇಶದಲ್ಲಿ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ತಟ್ಟೆಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಬೋನಿಗೆ ಕಳೆದ ರಾತ್ರಿ ಕರಡಿ ಸೆರೆ ಸಿಕ್ಕಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ದಾಸರಕಲ್ಲಹಳ್ಳಿ, ತಿಮ್ಲಾಪುರ, ತಿಮ್ಲಾಪುರ ಕ್ಯಾಂಪ್, ಜಂಬರಘಟ್ಟೆ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಾಣಿಸುತ್ತಿತ್ತು.
ಜಮೀನು ಕೆಲಸಕ್ಕೆ ತೆರಳಲು ರೈತರು, ಕಾರ್ಮಿಕರು ಹಿಂದೇಟು ಹಾಕುತ್ತಿದ್ದರು. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡಲು ಹೆದರುತ್ತಿದ್ದರು. ಎಮ್ಮೆಹಟ್ಟಿ ಗ್ರಾಮದ ಆನಂದಪ್ಪ ಎಂಬುವರ ಮೇಲೆ ಕೆಲ ದಿನಗಳ ಹಿಂದೆ ಕರಡಿ ದಾಳಿ ನಡೆಸಿತ್ತು. ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿಗೆ ಆನಂದಪ್ಪ ಗಾಯಗೊಂಡಿದ್ದರು.


ಗ್ರಾಮಸ್ಥರ ಆತಂಕದ ನಡುವೆ ಮಾವಿನಕಟ್ಟೆ ವಲಯ ಅರಣ್ಯ ಅಧಿಕಾರಿಗಳು ಕರಡಿಯ ಚಲನವಲನ ಗಮನಿಸಿ ಬೋನ್ ಇರಿಸಿದ್ದರು. ಆರ್‌ಎಫ್‌ಒ ಜಗದೀಶ ಮಾರ್ಗದರ್ಶನದಲ್ಲಿ ಬೋನ್ ಇರಿಸಿದ್ದು, ಇವತ್ತು ಕರಡಿ ಸೆರೆಯಾಗಿದೆ. ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊಂಡೊಯ್ದಿದ್ದಾರೆ.
ಕರಡಿ ಸೆರೆಯಿಂದಾಗಿ ಈ ಭಾಗದ ಗ್ರಾಮಸ್ಥರು ನೆಮ್ಮದಿ ಪಡುವಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















