ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ Minister Govinda Karajola ಅವರು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಆ.10) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

24 ಗಂಟೆಗಳಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕೂಡಲೇ ಸಂಪರ್ಕ ಕಲ್ಪಿಸಬೇಕೆಂದು ನಿರ್ದೇಶನ ನೀಡಿದರು.
ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಳ್ಳುವವರಿಗೆ ಕುಟುಂಬಗಳು ಹೊಂದಿರುವ ಹಳೆಯ ನಳಗಳ ಸಂಪರ್ಕವನ್ನು ಮುಂದುವರಿಸಬೇಕು. ಜಲಜೀವನ ಮಿಷನ್ ಯೋಜನೆ ಸಂಪೂರ್ಣ ಅನುಷ್ಠಾನಗೊಂಡ ಬಳಿಕವೇ ಹಳೆಯ ಸಂಪರ್ಕ ತೆರವುಗೊಳಿಸಬೇಕು ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸೌಲಭ್ಯದ ಹಾಸಿಗೆಗಳು, ಆಕ್ಸಿಜನ್ ಘಟಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಸದರಿ ಸೌಲಭ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಸರಕಾರಿ ಆಸ್ಪತ್ರೆಗಳು ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಬಗ್ಗೆಯೂ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅಗತ್ಯ ಔಷಧೋಪಕರಣಗಳ ದಾಸ್ತಾನು ಇಟ್ಟುಕೊಳ್ಳಬೇಕು ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಳ್ಳಾರಿ ನಾಲಾ ನಿರ್ವಹಣೆಯನ್ನು ಪಾಲಿಕೆ ಹಾಗೂ ಉಳಿದ ಕಡೆಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಬೇಕು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ 35 ಕಿ.ಮೀ. ಹರಿವು ಇರುತ್ತದೆ. ಅದನ್ನು ಪಾಲಿಕೆ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ನಾಲಾ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು.
Also read: ಪ್ಯಾನಲ್ ವಕೀಲರು ಪ್ರಾಧಿಕಾರದ ಪಂಚೆಂದ್ರೀಯ ಇದ್ದಂತೆ: ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ
ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅನುಕೂಲವಾಗುವಂತೆ ಸಮಗ್ರ ಯೋಜನಾ ವರದಿ(ಡಿಪಿಆರ್) ರೂಪಿಸುವಂತೆ ಸೂಚನೆ ನೀಡಿದರು.
ನಾಲಾ ವ್ಯಾಪ್ತಿಯ ರೈತರನ್ನು ಭೇಟಿ ಮಾಡಿ ಅವರ ಮನವೊಲಿಸುವ ಮೂಲಕ ಬದುಗಳಲ್ಲಿ ನಿಲ್ಲುವ ನೀರು ನಾಲಾಕ್ಕೆ ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದರು.

ಆಗಸ್ಟ್ 12 ರಿಂದ 15 ರವರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಕರೆ ನೀಡಿದರು.
ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಬಹುತೇಕ ಮನೆಗಳ ಮೇಲೆ ನಾಗರಿಕರು ಸ್ವಯಂಪ್ರೇರಣೆಯಿಂದ ಧ್ವಜಾರೋಹಣ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ಸಹಕಾರ ನೀಡಬೇಕು ಎಂದರು.
ಶೇ. 75 ರಷ್ಟು ಮನೆಗಳಿಗೆ ಧ್ವಜ ವಿತರಣೆ ಗುರಿ:
ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಶೇ.75 ರಷ್ಟು ಮನೆಗಳಿಗೆ ಧ್ವಜಗಳನ್ನು ಪೂರೈಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಆ ಪ್ರಕಾರ ಒಟ್ಟಾರೆ 7.50 ಲಕ್ಷ ಧ್ವಜಗಳ ವಿತರಣೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಹತ್ತು ಲಕ್ಷ ಮನೆಗಳಿದ್ದು, ಅದರ ಶೇ.75 ರಷ್ಟು ಮನೆಗಳಿಗೆ ಧ್ವಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಗೆ 4.83 ಧ್ವಜಗಳು ಈಗಾಗಲೇ ಬಂದಿರುತ್ತವೆ. ಅವುಗಳ ಪೈಕಿ 3.50 ಲಕ್ಷಕ್ಕೂ ಅಧಿಕ ಧ್ವಜಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಹೇಳಿದರು.

ಅತಿವೃಷ್ಟಿತಿಂದ ಜಿಲ್ಲೆಯಲ್ಲಿ ಒಟ್ಟಾರೆ 255 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಹಾನಿಯ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಲಾಗುವುದು ಎಂದರು.
ಮಕ್ಜಳಲ್ಲಿ ಕಾಲು ಮತ್ತು ಬಾಯಿರೋಗ ಕೆಲವು ರಾಜ್ಯದಲ್ಲಿ ಕಂಡುಬಂದಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.
ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post