ಕಲ್ಪ ಮೀಡಿಯಾ ಹೌಸ್ | ಸೊರಬ |
ರೈತ ಮಳೆ ಗಾಳಿ ಚಳಿಗೆ ಅಂಜದೇ ಕಠಿಣ ಪರಿಶ್ರಮ ವಹಿಸಿ ದೇಶಕ್ಕೆ ಅನ್ನ ನೀಡುತ್ತಾನೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ರೈತ ದಿನಾಚರಣೆ ಆಚರಿಸುವಂತೆ ಆಗಲಿ ಎಂದು ಸರ್ಕಾರವನ್ನು ಒತ್ತಾಯಿಸಲು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಇದೇ 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ತಿಳಿಸಿದರು.
ಇಂದು ಪತ್ರಿಕಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರ ಎಲ್ಲಾ ಮಹನೀಯರ ದಿನಾಚರಣೆ ಮಾಡುವ ರೀತಿಯಲ್ಲಿ ರೈತ ದಿನಾಚರಣೆಯನ್ನೂ ಕೂಡಾ ಮಾಡುವಂತಾಗಲಿ. 2016 ರಿಂದ ಸಮಿತಿ ವತಿಯಿಂದ ವರ್ಷಂಪ್ರತಿ ಡಿಸೆಂಬರ್ 23 ರಂದು ರೈತ ದಿನಾಚರಣೆ ಆಚರಿಸುತ್ತಿದ್ದೇವೆ. ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಮನವಿಯನ್ನು ಕೂಡಾ ಮಾಡಿದ್ದು ಯಾವುದೇ ಫಲ ಕಂಡಿಲ್ಲ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ ರೈತ ತಾನು ಬೆಳೆದ ಬೆಳೆ ಒಣಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು. ಪಶು ಆಸ್ಪತ್ರೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಆದೇಶಿಸುವುದು. ಅಲ್ಲದೇ ಸೊರಬ ಪುರಸಭೆ ಎದುರು ರೈತ ವೃತ್ತ ಮಾಡುವಂತೆಯೂ ಇದರ ಜೊತೆಗೆ ಇನ್ನೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೊರಬದಿಂದ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಬಿದರಗೇರಿ, ಸದಸ್ಯರುಗಳಾದ ಸುರೇಶ್ ಗೌಡ ಕುಪ್ಪೆ, ಯುವರಾಜ್ ಕಾನಗೋಡು, ಶರತ್ ಸ್ವಾಮಿ ಪಾಲ್ಗೊಂಡಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















