ಬೆಳಗಾವಿ: ಈ ಬಾರಿಯ ಕಡು ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿರುವ ಹೋಗಿದ್ದು, ಇದರಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.
ನೀರಿನ ಸಮಸ್ಯೆ ವಿಪರೀತವಾದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟು ದಿನಗಳ ಕಾಲ ಲೋಕಸಭಾ ಚುನಾವಣೆಯಲ್ಲಿ ಬ್ಯುಜಿಯಾಗಿದ್ದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನವನ್ನು ಮಾತ್ರ ಮಾಡದೇ ಇರುವದು ವಿಪರ್ಯಾಸವೆ ಸರಿ. ಇನ್ನೂ ಚುನಾವಣೆ ಕರ್ತವ್ಯಕ್ಕೆ ನೇಮಕವಾಗಿದ್ದ ಅಧಿಕಾರಿಗಳು ಕೂಡ ಮೂಲಭೂತ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ವಹಿಸಿದ್ದು ಸದ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದೇ ನಿತ್ಯವೂ ಸಂಕಷ್ಟ ಎದುರಾಗುತ್ತ ಇರುವರಿಂದಾಗಿ ರೈತರ ಆಕ್ರೋಶದ ಕಟ್ಟೆ ಒಡೆದಿದ್ದು ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ದ ಹರಿ ಹಾಯ್ದಿದ್ದಾರೆ.

ಅಲ್ಲದೆ ಕಳೆದ ಎರಡುವರೆ ತಿಂಗಳಲ್ಲಿ ಅಥಣಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೂ ಕೂಡ ಜಾನುವಾರುಗಳಿಗೆ ಮೇವಿಲ್ಲ, ಇನ್ನೊಂದು ಕಡೆ ಜನರಿಗೆ ಅಗತ್ಯ ಇದ್ದಲ್ಲಿ ಕುಡಿಯುವ ನೀರನ್ನು ಸರ್ಕಾರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡದೆ ಸಮಸ್ಯೆ ನಿರ್ಮಾಣವಾಗಿದೆ. ಇದು ನಿತ್ಯದ ಕೆಲಸಗಳನ್ನು ಬಿಟ್ಟು ಏಳೆಂಟು ಕಿಲೋಮೀಟರ್ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೃಷ್ಣಾ ನದಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಪ್ರತಿಭಟನಾ ನಿರತ ರೈತರು, ಕಳೆದ ಮೂರು ತಿಂಗಳಿಂದ ನದಿ ಬತ್ತಿ ಹೊಗಿದ್ದರೂ ಕೂಡ ಮತ ಕೇಳಲು ಬಂದ ಜನಪ್ರತಿನಿಧಿಗಳು ಸುಳ್ಳು ಹೇಳಿ ಕುಡಿಯುವ ನೀರಿನ ರಾಜಕಾರಣ ಮಾಡುತ್ತಿದ್ದು, ಜನಪ್ರತಿನಿಧಿಗಳ ನಾಟಕ ನೋಡಿ ಸಾಕಾಗಿದೆ. ಪರಿಸ್ಥಿತಿ ಗಂಭೀರವಾಗುವ ಮುನ್ನ ಸ್ಪಂದಿಸದೇ ಇದ್ದರೆ ಎಲ್ಲ ಸರ್ಕಾರಿ ಕಚೇರಿಗಳ ಎದುರು 78 ಹಳ್ಳಿಗಳ ರೈತರು ಮತ್ತು ಜನರು ಜಾನುವಾರುಗಳ ಜೊತೆಗೆ ಮುತ್ತಿಗೆ ಹಾಕುತ್ತೇವೆ. ನೀರಿನ ವಿಷಯದಲ್ಲಿ ಪಕ್ಷಭೇಧ ಮರೆತು ಕುಡಿಯುವ ನೀರಿನ ವ್ಯವಸ್ಥೆ ಮಾಡದೆ ಇದ್ದಲ್ಲಿ ರೈತರ ಹೆಣಗಳನ್ನು ನೋಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತ ಮುಖಂಡ ಮಹದೇವ ಮಡಿವಾಳರ ಎಚ್ಚರಿಸಿದ್ದಾರೆ.

ಮಹದೇವ ಮಡಿವಾಳರ ರೈತ ಮುಖಂಡ ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಎಂದು ಕಾದುನೋಡಬೇಕು.

















