ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜನ ಮರುಳೋ ಜಾತ್ರೆ ಮರುಳೋ… ಎಂಬ ಗಾದೆ ಮಾತಿನಂತೆ, ಧಾರ್ಮಿಕ ಕ್ಷೇತ್ರವೊಂದರ ದೇವರ ಮುಂಭಾಗ ಹಚ್ಚಿಟ್ಟಿದ್ದ ದೀಪ ನಂದಿ ಹೋಗಿದೆ. ಈ ಕಾರಣದಿಂದ ಮನೆ ಮುಂಭಾಗ ದೀಪ ಹಚ್ಚಿಡಬೇಕು.. ಎಂದು ಹಬ್ಬಿದ ವದಂತಿ ನಂಬಿದ ಕೆಲವು ನಾಗರಿಕರು, ತಡರಾತ್ರಿ ತಮ್ಮ ಮನೆಗಳ ಮುಂಭಾಗ ದೀಪ ಹಚ್ಚಿಟ್ಟು ನಿದ್ರೆಯಿಲ್ಲದ ರಾತ್ರಿ ಕಳೆದ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆಯೂ ಕೂಡ ಕೆಲ ನಾಗರಿಕರು ತಮ್ಮ ಮನೆಗಳ ಮುಂಭಾಗ ದೀಪ ಹಚ್ಟಿಡುತ್ತಿದ್ದ ದೃಶ್ಯ ಕಂಡುಬಂದಿತು. ಇದೆಲ್ಲ ವದಂತಿಯಾಗಿದೆ. ಇದನ್ನು ನಂಬಬೇಡಿ ಎಂಬ ಮಾತನ್ನು ಕೇಳುವ ಸ್ಥಿತಿಯಲ್ಲಿ ಕೆಲ ನಾಗರೀಕರು ಇಲ್ಲದ್ದಿದ್ದು ಕಂಡುಬಂದಿತು!
ಭಕ್ತರ ಭಾವನೆಗಳ ಜೊತೆ ಚೆಲ್ಲಾಟ ಬೇಡ: ಯುವ ಮುಖಂಡ ಕೆ. ರಂಗನಾಥ್
ಪ್ರಸ್ತುತ ಕೊರೋನಾ ಮಹಾಮಾರಿಯ ಬಗ್ಗೆ ನಾಗರೀಕರು ಅಕ್ಷರಶಃ ಭಯಭೀತರಾಗಿದ್ದಾರೆ. ಗೊಂದಲದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪವಿತ್ರ ಧಾರ್ಮಿಕ ಕ್ಷೇತ್ರ, ಕೋಟ್ಯಾಂತರ ಭಕ್ತರ ಶ್ರದ್ಧಾ ಕೇಂದ್ರ ಧರ್ಮಸ್ಥಳದಲ್ಲಿ ದೇವರಿಗೆ ಹಚ್ಚಿಟ್ಟಿದ್ದ ನಂದಾದೀಪ ಆರಿದೆ. ಇದರಿಂದ ವಿಪತ್ತು ಎದುರಾಗಲಿದೆ. ಮನೆಯ ಮುಂಭಾಗ ದೀಪ ಹಚ್ಚಿ ಎಂದು ಕಿಡಿಗೇಡಿಗಳು ಸೃಷ್ಟಿಸಿದ ವದಂತಿಯಿಂದ, ತಡರಾತ್ರಿಯ ವೇಳೆ ನಾಗರೀಕರು ಗೊಂದಲಕ್ಕೊಳಗಾಗುವಂತಾಯಿತು. ಸದ್ಯ ಎದುರಾಗಿರುವ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ, ಭಕ್ತರ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಕೊರೋನಾ ಮಹಾಮಾರಿ ನಿಯಂತ್ರಣದತ್ತ ನಾವೆಲ್ಲರು ಗಮನಹರಿಸಬೇಕಾಗಿದೆ ಎಂದು ಯುವ ಮುಖಂಡ ಕೆ.ರಂಗನಾಥ್ ತಿಳಿಸಿದ್ದಾರೆ.
ವದಂತಿಯೇನು?
ಧರ್ಮಸ್ಥಳದಲ್ಲಿ ದೇವರ ಮುಂಭಾಗ ಹಚ್ಚಿಟ್ಟಿದ್ದ ದೀಪ ನಂದಿದೆ. ಈ ಕಾರಣದಿಂದ ಪ್ರತಿಯೋರ್ವರು ತಮ್ಮ ಮನೆಗಳ ಮುಂಭಾಗ ದೀಪ ಹಚ್ಚಿಡುವಂತೆ.. ಎಂಬಿತ್ಯಾದಿ ಮಾಹಿತಿ ವ್ಯಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಇದು ಕೆಲ ಗಂಟೆಗಳಲ್ಲಿಯೇ ವೈರಲ್ ಆಗಿದೆ. ಇದನ್ನು ನಂಬಿದ ಕೆಲ ನಾಗರಿಕರು, ಕುಟುಂಬದ ಸದಸ್ಯರೆಲ್ಲರೊಂದಿಗೆ ತಡರಾತ್ರಿಯೇ ತಮ್ಮ ಮನೆ ಮುಂಭಾಗ ದೀಪ ಹಚ್ಚಿದ್ದಾರೆ. ತಮ್ಮ ನೆರೆಹೊರೆಯವರನ್ನು ನಿದ್ರೆಯಿಂದೆಬ್ಬಿಸಿ ಮಾಹಿತಿ ನೀಡಿದ್ದಾರೆ.
ನಂತರ ಬಂಧು-ಬಾಂಧವರು, ಪರಿಚಯದವರ ಮೊಬೈಲ್’ಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಮ್ಮ ಮೊಬೈಲ್’ಗೆ ಬಂದ ಸಂದೇಶಗಳನ್ನು ಇತತರಿಗೂ ಫಾರ್ವರ್ಡ್ ಮಾಡಿದ್ದಾರೆ. ಮೊದಲೇ ನಾಗರಿಕರು ಕೊರೋನಾ ಮಹಾಮಾರಿ ಭೀತಿಯಲ್ಲಿ ದಿನದೂಡುತ್ತಿದ್ದಾರೆ. ಇಂತಹ ವೇಳೆ ಕೆಲವು ಕಿಡಿಗೇಡಿಗಳು ಈ ರೀತಿಯ ವದಂತಿಗಳನ್ನು ಹಬ್ಬಿಸಿ, ನಾಗರಿಕರನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಾಗರಿಕರು ನಂಬಬಾರದು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳೆಲ್ಲ ಸತ್ಯವೆಂದು ಭಾವಿಸಬಾರದು. ಈ ಬಗ್ಗೆ ಸಂಬಂಧಿಸಿದ ಧಾರ್ಮಿಕ ಕ್ಷೇತ್ರದವರು ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕಾರ್ಯ ನಡೆಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಪಡುತ್ತಾರೆ.
ವರದಿ: ಬಿ. ರೇಣುಕೇಶ್
Get in Touch With Us info@kalpa.news Whatsapp: 9481252093
Discussion about this post