ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಸಂಜೆ 6:30ಕ್ಕೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ರಾಜ್ಯದ 31ನೆಯ ಜಿಲ್ಲೆಯಾಗಿ ಉದ್ಘಾಟನೆಯಾಯಿತು.
ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆನಂದ್ ಸಿಂಗ್ ರವರು ಹಾಗೂ ವೇದಿಕೆಯ ಮೇಲೆ ಆಸೀನರಾಗಿದ್ದ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕರ್ನಾಟಕ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರವನ್ನು ಉದ್ಘಾಟಿಸಲಾಯಿತು.
ಸಾಂಪ್ರದಾಯಿಕ ಕಲಾವೈಭವ ವಡಕರಾಯ ದೇವಸ್ಥಾನದಿಂದ ಜಿಲ್ಲೆಯ ಕ್ರೀಡಾಂಗಣದ ವೇದಿಕೆಯವರೆಗೆ ಸುಮಾರು 20-25 ಕಲಾತಂಡಗಳು ರಸ್ತೆಯುದ್ದಕ್ಕೂ ಸಂಭ್ರಮದ ತಮ್ಮ ಕಲೆಗಳನ್ನು ಪ್ರದರ್ಶನ ಮಾಡುತ್ತಾ ವೇದಿಕೆಯ ಹತ್ತಿರ ಆಗಮಿಸಿದರು. ನಂತರ ಉದ್ಘಾಟನಾ ಕಾರ್ಯಕ್ರಮವು ಪ್ರಾರಂಭವಾಯಿತು.
ಉದ್ಘಾಟನೆಗೂ ಮುನ್ನ ಬೃಹತ್ತಾದ ಸುಂದರವಾದ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಬಳ್ಳಾರಿ ಹಾಗೂ ಹೊಸಪೇಟೆ ಸುತ್ತಮುತ್ತಲಿನ ಊರಿನ ಕಲಾವಿದರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಇದರಲ್ಲಿ ಮುಖ್ಯವಾಗಿ ಭರತನಾಟ್ಯ, ಚಲನಚಿತ್ರಗಳ ಹಾಡುಗಳು, ಸಂಗೀತ, ನಾಟ್ಯ, ದೀಪದ ನೃತ್ಯ, ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳು ಪ್ರಾರಂಭಿಕ ಹಂತದಲ್ಲಿ ವೇದಿಕೆಯ ಮೇಲೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕಿ ಎಂ.ಡಿ. ಪಲ್ಲವಿ ಅವರು ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು. ಕಾರ್ಯಕ್ರಮದ ಮಧ್ಯೆ ಹೊಸಪೇಟೆ, ಬಳ್ಳಾರಿ, ವಿಜಯನಗರ ಹಾಗೂ ವಿಜಯನಗರ ಕ್ಷೇತ್ರಕ್ಕೆ ಸೇರ್ಪಡೆಯಾಗಿರುವ 5 ಜಿಲ್ಲೆಗಳಿಗೂ ಸರ್ಕಾರದ ವತಿಯಿಂದ ಅನುದಾನವಾಗಿರುವ ಕೆಲಸ ಕಾರ್ಯಗಳ ವಿವರದ ಆರು ಅಡಿ ಎತ್ತರದ ಪುಸ್ತಕ ಬಿಡುಗಡೆ ಮಾಡಿ ಎಲ್ಲರ ಮಾಹಿತಿಗಾಗಿ ಬಿ.ಎಸ್. ಆನಂದ್ ಸಿಂಗ್ ಡಾಟ್ ಇನ್ ವೆಬ್ಸೈಟ್ ಉದ್ಘಾಟನೆ ಮಾಡಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಸುತ್ತಮುತ್ತಲ ಹಳ್ಳಿಯ ಜನರು ಸುಮಾರು 5000ಕ್ಕೂ ಹೆಚ್ಚು ಜನರು ಕಾರ್ಯಕ್ರಮವನ್ನು ವೀಕ್ಷಿಸಿದರು. ಎರಡು ದಿನಗಳ ಕಾಲ ನಡೆಯುವ ಉತ್ಸವ ಉದ್ಘಾಟನಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕ-ಗಾಯಕಿಯರು, ಅನೇಕ ಕಲಾವಿದರು ಭಾಗವಹಿಸಿದ್ದರು. ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸ್ವಾಗತ ಭಾಷಣ ನೆರವೇರಿಸಿಕೊಟ್ಟರು.
ಉದ್ಘಾಟಕರಾಗಿ ಆಗಮಿಸಿದ್ದ ಎಸ್. ಆರ್. ಬೊಮ್ಮಾಯಿ ಅವರು, ತಮ್ಮ ಭಾಷಣದಲ್ಲಿ ವಿಜಯನಗರ ಮತ್ತು ಬಳ್ಳಾರಿ ಕ್ಷೇತ್ರಗಳಿಗೆ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಅದನ್ನು ಸರಿಯಾಗಿ ವಿನಿಯೋಗ ಮಾಡುವುದರ ಮೂಲಕ ಅಭಿವೃದ್ಧಿ ಕಾರ್ಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಆನಂದ್ ಸಿಂಗ್ ಅವರಿಗೆ ಮತ್ತು ವಿಜಯನಗರ ಜಿಲ್ಲೆಯ ಜನತೆಗೆ ಅಭಿನಂದನೆ ತಿಳಿಸಿದರು. ರಾಜಕೀಯ ವೃತ್ತಿಯನ್ನು ಪಣವಾಗಿಟ್ಟು ಹೋರಾಟ ಮಾಡಿದ ಆನಂದ್ ಸಿಂಗ್ ಅವರಿಗೆ ಜಯ ಲಭಿಸಿದೆ. ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದರ ಮೂಲಕ ಕರ್ನಾಟಕದಲ್ಲಿ ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಸಚಿವ ಶ್ರೀರಾಮುಲು ಮಾತನಾಡಿ, ಬಳ್ಳಾರಿ ವಿಭಜನೆಯಾಗಿ ಮಾಡಲಾಗಿದೆ ಎಂಬ ಕಾರಣಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಎಲ್ಲ ಕೆಲಸ ಕಾರ್ಯಗಳಿಗೆ ಬಳ್ಳಾರಿಗೆ ಬಂದು ಕೆಲಸ ಮಾಡಿಸಿಕೊಳ್ಳಲು ತೊಂದರೆ ಆಗುತ್ತಿದೆ ಹಾಗಾಗಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಿ ಜನರಿಗೆ ಅನುಕೂಲ ಮಾಡಲಾಗಿದೆ. ಅಭಿವೃದ್ಧಿಗಾಗಿ ದುಡಿಯುತ್ತಿರುವ ಆನಂದ್ ಅವರಿಗೆ ಅಭಿನಂದನೆಗಳನ್ನು ತಿಳಿಸುವುದರ ಮೂಲಕ ಬಳ್ಳಾರಿ ಮತ್ತು ವಿಜಯನಗರ ಕ್ಷೇತ್ರಗಳನ್ನು ಅಭಿವೃದ್ಧಿಗೆ ನನ್ನ ಜೊತೆ ಆನಂದ್ ಸಿಂಗ್ ಇರುತ್ತಾರೆ, ಎರಡು ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವುದರ ಮೂಲಕ ಉತ್ತಮ ಆಡಳಿತವನ್ನು ಮಾಡಿ ತೋರಿಸುತ್ತೇವೆ ಎಂದು ತಿಳಿಸಿದರು.
ಆನಂದ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ವಿಜಯನಗರ ಜಿಲ್ಲೆಗಾಗಿ ಹೋರಾಟ ಮಾಡಿದ ಸಮಸ್ತ ಜನತೆ, ಮಠಾಧೀಶರಿಗೆ ಧನ್ಯವಾದಗಳನ್ನು ತಿಳಿಸುವುದರ ಮೂಲಕ ಇನ್ನೊಂದು ವರ್ಷದಲ್ಲಿ ವಿಜಯನಗರ ಜಿಲ್ಲೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತನ್ನ ಸೊಬಗನ್ನು ಹೆಚ್ಚಿಸಿಕೊಳ್ಳುವುದು ಎಂದು ತಿಳಿಸಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸಚಿವರು, ಶಾಸಕರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ಸರ್ಕಾರಿ ಅಧಿಕಾರಿ ವರ್ಗ, ಮುಖ್ಯವಾಗಿ ವಿಜಯನಗರ ಕ್ಷೇತ್ರದ ಮತಬಾಂಧವರು ಭಾಗವಹಿಸಿ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಶೋಭೆಯನ್ನು ತರುವುದರ ಮೂಲಕ ನೂತನ ವಿಜಯನಗರ ಜಿಲ್ಲೆಯನ್ನು ಸ್ವಾಗತಿಸಿದರು.
ವರದಿ : ಮುರಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post