ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ವಿಐಎಸ್’ಎಲ್ ಕಾರ್ಖಾನೆ ಆವರಣದಲ್ಲಿ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಕಳೆದ ಜುಲೈ ತಿಂಗಳಿನಿಂದ ಕಾರ್ಖಾನೆ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಸೆರೆಗೆ ಬೋನು ಇರಿಸಿದ್ದರು. ಆದರೆ, ಚಿರತೆ ಸಿಕ್ಕಿರಲಿಲ್ಲ ಮಾತ್ರವಲ್ಲ ಆನಂತರ ಕಾಣಿಸಿಕೊಂಡಿರಲಿಲ್ಲ.
ಚಿರತೆ ಓಡಾಡುತ್ತಿರುವ ವದಂತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸೆರೆ ಹಿಡಿಯವ ಪ್ರಯತ್ನವನ್ನು ಮುಂದುವರೆಸಿದ್ದರು. ಸೆರೆ ಹಿಡಿಯುವ ಸಲುವಾಗಿ ಕಾರ್ಖಾನೆ ಆವರಣದಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ನಿನ್ನೆ ರಾತ್ರಿ ಬಿದ್ದಿದೆ.
ಕಾರ್ಖಾನೆಯ ಪಿಕಾಕ್ ಯಾರ್ಡ್ ಪ್ರದೇಶದಲ್ಲಿ ಇರಿಸಲಾಗಿದ್ದ ಬೃಹತ್ ಬೋನಿನಲ್ಲಿ ಸೆರೆ ಸಿಕ್ಕಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.
ಬೋನಿಗೆ ಬಿದ್ದಿರುವ ಚಿರತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದೂಕು ಮೂಲಕ ಪ್ರಜ್ಞೆ ತಪ್ಪುವ ಇಂಜೆಕ್ಷನ್ ನೀಡಿದ್ದಾರೆ. ಸದ್ಯ ಚಿರತೆ ಪ್ರಜ್ಞೆ ತಪ್ಪಿದ್ದು, ಅಧಿಕಾರಿಗಳು ಹಾಗೂ ಪಶು ವೈದ್ಯರು ಪರಿಶೀಲನೆ ನಡೆಸಿದ್ದಾರೆ.
ನಗರಸಭಾ ಸದಸ್ಯ ಬಿ.ಕೆ. ಮೋಹನ್, ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದಾರೆ. ಚಿರತೆಯನ್ನು ಎಲ್ಲಿಗೆ ಸ್ಥಳಾಂತರಿಸುವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















