ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರದ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‍ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‍ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು 10 ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ.
ಈ ಸೇವಾ ಕಾರ್ಯಕ್ಕೆ ಸಿದ್ದರೂಢ ನಗರದ 1ನೇ ತಿರುವಿನಲ್ಲಿರುವ ಅವರ ನಿವಾಸದ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
ಈ ಕುರಿತು ಮಾತನಾಡಿದ ಆನಂದ್, ತೀರ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಬೇಕೆಂಬ ಮನೋಭಾವನೆಯೊಂದಿಗೆ ಈ ಕಾರ್ಯ ಕೈಗೊಳ್ಳುತ್ತಿದ್ದೇನೆ. ನಗರಸಭೆ 35 ವಾರ್ಡ್‍ಗಳಲ್ಲಿ ತಲಾ ಒಂದೊಂದು ವಾರ್ಡ್‍ನಲ್ಲಿ 200 ಜನರನ್ನು ಹಾಗು 3 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪಂಚಾಯಿತಿಯಲ್ಲೂ 1000 ಜನರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ.ಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್. ಶ್ರೀಹರ್ಷ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಪತ್ರಿಕಾ ವಿತರಿಕರಿಗೆ ಸಾಂಕೇತಿಕವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post