ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ಪ್ರಕರಣದ ರೆಡ್’ಝೋನ್ ಎನಿಸಿದ ಬೆಂಗಳೂರು-ಮೈಸೂರಿನ ನಾಗರಿಕರು ಶಿವಮೊಗ್ಗ ಜಿಲ್ಲೆಗೆ ವಿವಿಧ ಕಾರಣಗಳಿಂದ ಬರಲಾರಂಭಿಸಿದ್ದಾರೆ ಎಂಬುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯ ಸಂಗತಿಯಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೂ ಕೊರೋನಾ ವೈರಸ್ ರೋಗದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ, ಜಿಲ್ಲೆಯ ಜನರು ಸಮಾಧಾನದ ನಿಟ್ಟುಸಿರುವು ಬಿಡುವಂತಾಗಿದೆ ಎಂಬುದು ನಿಜವದರೂ ಈ ಸಮಾಧಾನ ಎಷ್ಟು ದಿವಸ ಎಂಬ ಆತಂಕಕಾರಿ ಪ್ರಶ್ನೆ ನಾಗರಿಕರಲ್ಲಿ ಮೂಡಿಸಿದೆ.
ಭದ್ರಾವತಿ ತಾಲೂಕಿನಲ್ಲಿನ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪೋಲಿಸ್ ಇಲಾಖೆ ಸಿಬ್ಬಂದಿಗಳು ಕುಟುಂಬದ ಹಿತವನ್ನು ಬದಿಗಿಟ್ಟು ಹಗಲಿರುಳೆನ್ನದೆ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬೀದಿಗೀಳಿದು ದುಡಿಯುತ್ತಿದ್ದಾರೆ. ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆಯಾಗದಿರಲು ಇವರೆಲ್ಲರ ನಿರಂತರ ಪರಿಶ್ರಮವೇ ಕಾರಣ.
ಆದರೆ ಇನ್ನು ಮುಂದೆ ಇದೇ ವಾತಾವರಣ ಇರುವ ಬಗ್ಗೆ ಈ ಸಿಬ್ಬಂದಿಗಳಲ್ಲಿ ಅನುಮಾನ ಕಾಡಲು ಶುರು ಮಾಡಿದೆ. ಅದಕ್ಕೆ ಕಾರಣ ಕೊರೋನಾ ಮುಕ್ತ ಜಿಲ್ಲೆ ಎನಿಸಿದ ಶಿವಮೊಗ್ಗಕ್ಕೆ ಕೊರೋನಾ ಪೀಡಿತ ಜಿಲ್ಲೆಗಳಾಗಿ ರೆಡ್ ಝೋನ್’ನಲ್ಲಿರುವ ಬೆಂಗಳೂರು, ಮೈಸೂರಿನ ಜಿಲ್ಲೆಗಳಿಂದ ಜನ ಬಂದು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸೇರಿಕೊಳ್ಳುತ್ತಿದ್ದಾರೆ.
ಈ ರೀತಿ ಬರುವವರು ಆಯಾ ಜಿಲ್ಲೆಯ ಉನ್ನತ ಅಧಿಕಾರಿಗಳಿಂದ ಮದುವೆ, ಮತ್ತಿತರ ಕಾರಣಗಳನ್ನು ನೀಡಿ ಅನುಮತಿ ಪತ್ರ ಪಡೆಯುವ ಮೂಲಕ ಸೇಫ್ ಝೋನ್ ಎನಿಸಿದ ಶಿವಮೊಗ್ಗ ಜಿಲ್ಲೆಗೆ ರೆಡ್ ಝೋನ್ ಪ್ರದೇಶದ ಜನರು ಬಂದು ಸೇರುತ್ತಿದ್ದಾರೆ.
ಒಂದೆಡೆ ಕೊರೋನಾ ವಾರಿಯರ್ಸ್‌ಗಳು ಮನೆ, ಮಠ, ಹೆಂಡತಿ, ಮಕ್ಕಳ ಹಿತವನ್ನು ಬದಿಗಿಟ್ಟು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಅಗತ್ಯವಾದ ಪರಿಕರಗಳ ಕೊರತೆಯಿದ್ದರೂ ಲೆಕ್ಕಿಸದೆ ರಸ್ತೆಗಿಳಿದು ಕಷ್ಟಪಟ್ಟು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ ರೆಡ್ ಝೋನ್ ಪ್ರದೇಶದ ಜನರು ಉನ್ನತ ಅಧಿಕಾರಿಗಳ ಅನುಮತಿ ಪತ್ರವನ್ನು ಪಡೆದು ಜಿಲ್ಲೆಯೊಳಗೆ ಬಂದು ಸೇರುತ್ತಿರುವುದು ಅವರಲ್ಲಿ ಬೇಸರ ಮೂಡಿಸಿದ್ದು ಈವರೆಗಿನ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಯೇ ಎಂಬ ಪ್ರಶ್ನೆ ಅವರುಗಳನ್ನು ಕಾಡುವಂತೆ ಮಾಡಿದೆ.
ಎಲ್ಲವನ್ನೂ ಪರಮರ್ಶಿಸಿಯೇ ಅನುಮತಿ
ಈ ಕುರಿತಂತೆ ಜಿಲ್ಲಾ ಉಪವಿಭಾಗಾಧಿಕಾರಿ ಪ್ರಕಾಶ್ ಅವರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಸರ್ಕಾರದ ನಿಯಮಾವಳಿಗನುಗುಣವಾಗಿ ಎಲ್ಲವನ್ನೂ ಪಾರಾಮರ್ಶಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಗತ್ಯವಿರುವವರಿಗೆ ಬೇರೆಜಿಲ್ಲೆಗೆ ತೆರಳಲು ಅನುಮತಿ ಪತ್ರ ನೀಡಿರುತ್ತಾರೆ. ಆ ರೀತಿ ಅನ್ಯ ಜಿಲ್ಲೆಯಿಂದ ಬಂದತಹವರ ಮೇಲೂ ಸಹ ಸೂಕ್ತ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಅನುಮತಿಯಿಲ್ಲದೆ ಯಾರನ್ನೂ ಜಿಲ್ಲೆಯೊಳಗೆ ಬಿಡುತ್ತಿಲ್ಲ. ಹಿರಿಯ ಅಧಿಕಾರಿಗಳು ಎಲ್ಲವನ್ನೂ ಪರಮರ್ಶಿಸಿ ಅನುಮತಿ ಪತ್ರ ನೀಡಿರುತ್ತಾರಾದ್ದರಿಂದ, ಸಿಬ್ಬಂದಿಗಳು ಆತಂಕವಿಲ್ಲದೆ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.
ಆದರೆ ಕಾರಣ ಏನೇ ಇದ್ದರೂ ರೆಡ್ ಝೋನ್ ಪ್ರದೇಶದ ಬೆಂಗಳೂರು-ಮೈಸೂರು ಜನ ಶಿವಮೊಗ್ಗ ಜಿಲ್ಲೆಯೊಳಗೆ ಬಂದು ಸೇರುತ್ತಿರುವುದರಿಂದ ಕೋವಿಡ್ ಕಾರ್ಯಕರ್ತರ ಜೊತೆಗೆ ಇಲ್ಲಿನ ನಾಗರಿಕರಲ್ಲೂ ಸಹ ಆತಂಕ ಮೂಡಿಸಿದೆ.
ವಿಶೇಷ ವರದಿ: ಕೆ.ಎಸ್. ಸುಧೀಂದ್ರ ಭದ್ರಾವತಿ
Get in Touch With Us info@kalpa.news Whatsapp: 9481252093
Discussion about this post