ಭದ್ರಾವತಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ದೇಶದ ರಕ್ಷಣೆಗಾಗಿ ಪಕ್ಷ ಗೆಲ್ಲಿಸಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದ ಲೋಯರ್ ಹುತ್ತಾ ಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರನ್ನು ಕಾಣದ ಈ ಕ್ಷೇತ್ರದಲ್ಲಿ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಮುಂದೆ ನಡೆಯಲಿರುವ ನಗರಸಭೆ, ವಿಧಾನಸಭೆ ಚುನಾವಣೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತರು ಶ್ರಮಿಸಬೇಕಿದೆ. ಸರ್ಜಿಕಲ್ ಸ್ಟ್ರೈಕ್, ಯೋಧ ಅಭಿನಂದನ್ ಬಿಡುಗಡೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎತ್ತಿ ಹಿಡಿದಿರುವ ನರೇಂದ್ರ ಮೋದಿಯವರನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ಅಗತ್ಯವಿದೆ ಎಂದರು.
ಕ್ಷೇತ್ರದ ಅಭಿವೃದ್ದಿಗಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಸಾಕಷ್ಟು ಶ್ರಮವಹಿಸಿದ್ದಾರೆ. ನಗರದ ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕೇಂದ್ರದ ಅಮೃತ್ ಯೋಜನೆಯಡಿ 150 ಕೋಟಿರೂಗಳನ್ನು ಬಿಡುಗಡೆಗೊಳಿಸಿ ನಗರದೆಲ್ಲೆಡೆ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಸಂಚಾರ ಆರಂಭಿಸಿರುವ ಜನಶತಾಬ್ದಿ ರೈಲನ್ನು ನಗರದಲ್ಲಿ ನಿಲುಗಡೆಗೆ ಪ್ರಯತ್ನ ಹಾಕಿರುವುದು ಸಹ ಪಕ್ಷದ ಹೋರಾಟವಾಗಿದೆ. ಕೇಂದ್ರದ ಸಾಧನೆಯನ್ನು ಮತದಾರರಿಗೆ ಮನದಟ್ಟು ಮಾಡಿಸುವ ಮೂಲಕ ಪಕ್ಷದ ಗೆಲುವಿಗೆ ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರು.
ಹಾಸನ ಶಾಸಕ ಪ್ರೀತಂ ಗೌಡ ಮಾತನಾಡಿ, ಪಕ್ಷದ ಸಾಧನೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸದೆ ಸಾರ್ವಜನಿಕ ಸ್ಥಳಗಳಲ್ಲಿ, ಸುತ್ತಮುತ್ತಲಿನ ನಿವಾಸಿಗಳಿಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಉಗ್ರಗಾಮಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯಬೇಕಾಗಿದ್ದು ರಾಷ್ಟ್ರೀಯತೆಯ ಗುಣವಿರುವ ನಾಯಕನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮೋದಿಯವರನ್ನು ಬೆಂಬಲಿಸಲು ಬಿ.ವೈ. ರಾಘವೇಂದ್ರ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಇಂದು ವೈಯಕ್ತಿಕ ಲಾಭಕ್ಕಾಗಿ ದೇಶದ ರಾಷ್ಟ್ರೀಯತೆ ಮರೆತು ಹಣದ ಹಿಂದಿದ್ದೇವೆ. ಯುಪಿಎ ಸರಕಾರ ತನ್ನ ಅವಧಿಯಲ್ಲಿ ಕಾಶ್ಮೀರವನ್ನು ಉಗ್ರಗಾಮಿಗಳ ತಾಣವಾಗಿಸಿದೆ. ಸಿದ್ದರಾಮಯ್ಯ ಮಂಗಳೂರನ್ನು ನಾಲ್ಕನೇ ಕಾಶ್ಮೀರವನ್ನಾಗಿಸಿದ್ದಾರೆ ಅದನ್ನೇ ಮುಂದುವರೆಸಿಕೊಂಡು ಹೋದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯೂ ಕೂಡ ಉಗ್ರಗಾಮಿಗಳ ಕೈ ಸೇರಲಿದೆ ಎಂದು ಭವಿಷ್ಯ ನುಡಿದರು.
ಸಭೆಯಲ್ಲಿ ಪಕ್ಷದ ಅಧ್ಯಕ್ಷರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್ ನಗರಸಭಾ ಸದಸ್ಯರಾದ ವಿ. ಕದಿರೇಶ್, ಕೆ.ಎನ್. ಭೈರಪ್ಪಗೌಡ, ಮುಖಂಡರಾದ ದತ್ತಾತ್ರಿ, ಪ್ರವೀಣ್ ಪಟೇಲ್, ವಿಶ್ವನಾಥ್‌ರಾವ್, ಶ್ರೀನಾಥ್, ನವನೀತ್, ರಂಗನಾಥ್, ಸತೀಶ್, ಮರಿಸ್ವಾಮಿ, ಮಂಜುನಾಥ್ ಸೇರಿದಂತೆ ಹಲವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post