ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ಬಗ್ಗೆ ಎಲ್ಲೆಡೆ ಜಾಗೃತಿ ಅತಿ ಅವಶ್ಯಕವಾಗಿದ್ದು, ಸೋಂಕು ನಿಯಂತ್ರಿಸಲು ಗ್ರಾಮೀಣ ಜನರು ಹೆಚ್ಚಿನ ಪಾತ್ರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ನಿಯಂತ್ರಿಸಲು ನೆರವಿನ ಅಗತ್ಯ ಮಾತ್ರವಲ್ಲದೆ ಜಾಗೃತಿ ಸಹ ಅತಿ ಮುಖ್ಯವಾಗಿದೆ. ಕೊರೋನಾದಿಂದಾಗಿ ಪ್ರಪಂಚದಾದ್ಯಂತ ಹಲವಾರು ಸಂಕಷ್ಟ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಶ್ರಮಿಸುತ್ತಿವೆ. ಈ ನಡುವೆ ಲೆಕ್ಕವಿಲ್ಲದಷ್ಟು ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದೆ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಮಟ್ಟದಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ನಗರಮಟ್ಟದಲ್ಲೂ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಜಾಗೃತಿ ಅಭಿಯಾನ ನಡೆಯಬೇಕಾಗಿದೆ. ಕೋವಿಡ್ ಜಾಗೃತಿ ಪಡೆ ಹಾಗೂ ಗ್ರಾಮಸ್ಥರು ಕೋವಿಡ್-19ರ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯವಾಗಿದ್ದು, ಪ್ರತಿ ಹಂತದ ಎಚ್ಚರಿಕೆ ಕ್ರಮಗಳು ನಿಯಂತ್ರಣಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಗೆ ನೆರವು ನೀಡಬೇಕು ಎನ್ನುವ ಉದ್ದೇಶದೊಂದಿಗೆ ನಗರಸಭೆ 35 ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಅರ್ಹ ಕಡು ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವಾರ್ಡ್‌ಗಳ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಗ್ರಿಗಳು ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಕೆ. ಪರಮೇಶ್ ಹಾಗು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಲ್ಲಾ ವಾರ್ಡ್‌ಗಳ ನಗರಸಭಾ ಸದಸ್ಯರು, ಒಂದೊಂದು ವಾರ್ಡ್‌ಗಳಿಂದ ತಲಾ ಇಬ್ಬರು ಫಲಾನುಭವಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post