ಕಲ್ಪ ಮೀಡಿಯಾ ಹೌಸ್
ಲಕ್ಕವಳ್ಳಿ: ಕಳೆದೆರಡು ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮುಂಚಿತವಾಗಿಯೇ ತುಂಬುವ ಹಂತಕ್ಕೆ ನೀರು ಸಂಗ್ರಹವಾಗಿರುವ ಭದ್ರಾ ಜಲಾಶಯಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಬಾಗಿನ ಅರ್ಪಿಸಿದರು.
ಜಲಾಶಯಕ್ಕೆ ಬಾಗಿನ ಅರ್ಪಿಸುವ ಇಂದಿನ ಕಾರ್ಯಕ್ರಮಕ್ಕೆ ಹಬ್ಬದ ರೀತಿಯಲ್ಲಿ ಹಲವು ದಿನಗಳಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಮುಂಜಾನೆ ಅರ್ಚಕರ ವೇದಘೋಷದೊಂದಿಗೆ ಶಾಸಕರು ಭದ್ರೆಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದರು.
ನಗರಸಭಾ ಸದಸ್ಯ ಮೋಹನ್, ಪ್ರಮುಖರಾದ ಜಗದೀಶ್, ಶಿವಕುಮಾರ್, ಗಣೇಶ್, ಬಸವೇಶ್, ನಂದೀಶ್, ರವಿ, ಮಂಜುನಾಥ್ ಸೇರಿದಂತೆ ಕುಟುಂಬ ಸದಸ್ಯರು ಬಾಗಿನ ಅರ್ಪಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಗಮೇಶ್ವರ್, ನಾನು ಶಾಸಕನಾದ ಅವಧಿಯಲ್ಲೆಲ್ಲ ಭದ್ರಾ ನದಿ ತುಂಬಿದೆ. ಇಲ್ಲಿಯವರೆಗೂ ತುಂಬಿದ ಭದ್ರೆಗೆ ಬಾಗಿನ ಅರ್ಪಿಸುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂದರು.
ಭದ್ರಾ ನದಿ ತುಂಬುವುದರಿಂದ ಕುಡಿಯುವ ನೀರು, ರೈತರ ಬೆಳೆಗಳಿಗೆ ಹಾಗೂ ನೂರಾರು ಕಿಮೀ ದೂರದ ಕೈಗಾರಿಕೆಗಳಿಗೂ ಸಹ ಅನುಕೂಲವಾಗುತ್ತದೆ. ಪ್ರತಿವರ್ಷವೂ ಮಳೆಗಾಲದಲ್ಲಿ ಭದ್ರಾ ನದಿ ಹೀಗೆಯೇ ತುಂಬಿ ನದಿ ಆಶ್ರಿತ ಪ್ರದೇಶಗಳಲ್ಲಿ ಉತ್ತಮ ಬೆಳೆಯಾಗಲಿ, ಜನರ ಜೀವನ ಸದಾ ಹಸಿರಾಗಿರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಬಾಗಿನ ಅರ್ಪಣೆ ನಂತರ ನಡೆದ ಸರ್ವಧರ್ಮ ಸಭೆಯಲ್ಲಿ ಶಾಸಕರು ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಗುರುಗಳು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post