ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜಿಲ್ಲಾಡಳಿತ ನಿನ್ನೆ ಆದೇಶ ಹೊರಡಿಸಿರುವಂತೆ ನಗರದಲ್ಲೂ ಸಹ ಇಂದಿನಿಂದ ಮಧ್ಯಾಹ್ನ 2 ಗಂಟೆ ನಂತರ ಎಲ್ಲ ರೀತಿಯ ವ್ಯಾಪಾರ, ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹವರಿಗೆ ದಂಡ ವಿಧಿಸುವ ಅಥವಾ ಎಫ್’ಐಆರ್ ದಾಖಲು ಮಾಡಲಾಗುವುದು ಎಂದು ನಗರಸಭೆ ಆಯುಕ್ತ ಮನೋಹರ್ ಹೇಳಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ವ್ಯಾಪಕವಾಗುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳನ್ನು ಹತ್ತಿಕ್ಕುವ ಸಲುವಾಗಿ ಜಿಲ್ಲೆಯಾದ್ಯಂತ ಇಂದಿನಿಂದ ಮಧ್ಯಾಹ್ನ 2 ಗಂಟೆ ನಂತರ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಇದು ನಗರ ಹಾಗೂ ತಾಲೂಕಿಗೂ ಸಹ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್, ಮದ್ಯದ ಅಂಗಡಿಗಳು ಸೇರಿದಂತೆ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ಹಾಗೂ ಜನರ ಓಡಾಟಕ್ಕೂ ಸಹ ಅವಕಾಶವಿರುವುದಿಲ್ಲ. ಮಧ್ಯಾಹ್ನದ ನಂತರ ವ್ಯಾಪಾರ ಮಾಡುವುದು ಅಥವಾ ಅನಾವಶ್ಯಕವಾಗಿ ಜನರು ಓಡಾಡುವುದು ಕಂಡು ಬಂದಲ್ಲಿ ಅಂತಹವರಿಗೆ ದಂಡ ವಿಧಿಸುವ ಜೊತೆಯಲ್ಲಿ ಎಫ್’ಐಆರ್ ಸಹ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೆಡಿಕಲ್ ಶಾಪ್-ಹಾಲು ಮಾರಾಟಕ್ಕೆ ಅವಕಾಶ
ಇನ್ನು, ಮಧ್ಯಾಹ್ನ ನಂತರದ ಲಾಕ್ ಡೌನ್ ನಿಯಮ ಮೆಡಿಕಲ್ ಶಾಪ್ ಹಾಗೂ ಹಾಲು ಮಾರಾಟಕ್ಕೆ ಅನ್ವಯವಾಗುವುದಿಲ್ಲ. ಇವಕ್ಕೆ ಎಂದಿನಂತೆ ಅವಕಾಶವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದನ್ನು ತಡೆಗಟ್ಟಲು ನಮ್ಮೊಂದಿಗೆ ಜನರ ಸಹಕಾರವೂ ಸಹ ಬಹಳ ಮುಖ್ಯವಾಗುತ್ತದೆ. ಹೀಗಾಗಿ, ಲಾಕ್ ಡೌನ್ ಅವಧಿಯಲ್ಲಿ ಯಾರೂ ಸಹ ಮನೆಗಳಿಂದ ಹೊರಕ್ಕೆ ಬಾರದೇ ಆಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post