ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಆಕ್ಸಿಜನ್ ಘಟಕ ಸ್ಥಾಪನೆ ಸ್ಥಳ ಪರಿಶೀಲನೆಗಾಗಿ ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 150 ಕೆಎಲ್ ಸಾಮರ್ಥ್ಯದ ಸುಮಾರು 1000 ಜಂಬೋ ಆಕ್ಸಿಜನ್ ಸಿಲಿಂಡರ್‌ಗಳನ್ನು ಭರ್ತಿ ಮಾಡಬಹುದು. ಕಂಪ್ರೆಸರ್ ಅಳವಡಿಕೆ ಮಾಡುವುದರಿಂದ 400ರಿಂದ 500 ಕೆಎಲ್‌ನಷ್ಟು ಉತ್ಪಾದನೆ ಸಾಧ್ಯವಿದೆ. ಆದರೆ, ಹೆಚ್ಚಿನ ಆಕ್ಸಿಜನ್ ಉತ್ಪತ್ತಿ ಮಾಡಲು ಕಂಪ್ರೆಸರ್‌ಗಳ ಅಗತ್ಯವಿದ್ದು, ನೂತನ ಕಂಪ್ರೆಸರ್‌ಗಳನ್ನು ತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಯಾರದಾದರೂ ಬಳಿ ಸುಸ್ಥಿತಿಯಲ್ಲಿರುವ ಹಳೆಯ ಕಂಪ್ರೆಸರ್‌ಗಳು ಇದ್ದಲ್ಲಿ ಅವರನ್ನು ಸಂಪರ್ಕಿಸಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಎರಡು-ಮೂರು ದಿನದಲ್ಲಿ ಆಕ್ಸಿಜನ್ ಉತ್ಪಾದನೆ ಕಾರ್ಯ ಪ್ರಾರಂಭವಾಗಲಿದ್ದು, ವಿಐಎಸ್‌ಎಲ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಾಕಾಗುವಷ್ಟು ಆಕ್ಸಿಜನ್ ಉತ್ಪಾದನೆಯಾಗಲಿದೆ. ಕಂಪ್ರೆಸರ್ ಅಳವಡಿಕೆ ನಂತರ ಉತ್ಪಾದನೆಯಾಗುವ ಹೆಚ್ಚಿನ ಆಮ್ಲಜನಕವನ್ನು ಅವಶ್ಯಕತೆ ಇರುವೆಡೆಗೆ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಆಕ್ಸಿಜನ್‌ನ ಕೊರತೆ ಇದ್ದು, ಕೇಂದ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಸಲು ಮನವಿ ಮಾಡಲಾಗಿದೆ. ಕೇಂದ್ರ ಸಚಿವರಿಂದ ಸ್ಪಂದನೆ ದೊರೆತಿದ್ದು, ಕೊರೋನಾ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಆಮ್ಲಜನಕಕ್ಕೆ ಇಷ್ಟೊಂದು ಮಹತ್ವ ನೀಡುವ ಸಂದರ್ಭದ ಬರಲಿದೆ ಎಂಬ ಅರಿವು ಇರಲಿಲ್ಲ. ಆದರೆ ಕೊರೋನಾ ಆಮ್ಲಜನಕದ ಮಹತ್ವದ ಬಗ್ಗೆ ಅರಿವು ಮೂಡಿಸಿದೆ. ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ದಿನಕ್ಕೆ 100ರಿಂದ 1000 ಪಾಸಿಟಿವ್ ಪ್ರಕರಣಗಳು ಬರುತ್ತಿದ್ದವು. ಪ್ರಸ್ತುತ ಎರಡನೆಯ ಅಲೆಯಲ್ಲಿ ದಿನಕ್ಕೆ 50,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದೃಢಪಡುತ್ತಿರುವುದರಿಂದ ಆಕ್ಸಿಜನ್‌ನ ಕೊರತೆಯಾಗಿದೆ ಎಂದರು.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಆಕ್ಸಿಜನ್ ಮೇಲ್ಚಚಾರಣೆಗೆ ತಮ್ಮನ್ನು ನೇಮಿಸಿದ್ದು, ಸಚಿವ ಈಶ್ವರಪ್ಪ ಅವರ ಕೋರಿಕೆ ಮೇರೆಗೆ ತಾವು ಇಂದು ವಿಎಸ್‌ಐಎಲ್ ಕಾರ್ಖಾನೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಆಕ್ಸಿಜನ್ ಉತ್ಪಾದನೆ ಮಾಡಲು ಸ್ಥಳ ಸೂಕ್ತವಾಗಿದ್ದು, ಪ್ರಸ್ತುತ ಇರುವ ಕಂಪ್ರೆಸ್‌ರ್‌ಗಳಲ್ಲಿ ಜಿಲ್ಲೆಗೆ ಸಾಕಾಗುವಷ್ಟು ಆಮ್ಲಜನಕ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ಕೊರೋನಾ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಹಣಕಾಸಿನ ಕುರಿತು ಯೋಚನೆ ಮಾಡುವುದಿಲ್ಲ. ಜಿಂದಾಲ್ ಕಾರ್ಖಾನೆಯೂ ಸಹಕಾರ ನೀಡುತ್ತಿದ್ದು, ಕಬ್ಬಿಣ ಉತ್ಪಾದನೆಯನ್ನು ಕಡಿಮೆ ಮಾಡಿಕೊಂಡು ಆಕ್ಸಿಜನ್ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post